EBM News Kannada
Leading News Portal in Kannada

ಬಾಂಗ್ಲಾದೇಶ: ಗುಂಡಿಕ್ಕಿ ಖ್ಯಾತ ಲೇಖಕ ಷಹಜಹಾನ್‌ ಬಚ್ಚು ಹತ್ಯೆ

0

ಢಾಕಾ: ಭಾರತದ ಗೌರಿ ಲಂಕೇಶ್, ಎಂಎಂ ಕಲ್ಬುರ್ಗಿ, ಪನ್ಸಾರೆ, ದಾಬೋಲ್ಕರ್ ರಂತಹ ಜಾತ್ಯಾತೀತ ವಾದಿಗಳ ಹತ್ಯೆ ಪ್ರಕರಣ ಸುದ್ದಿಗೆ ಗ್ರಾಸವಾಗಿರುವಂತೆಯೇ ಇಂತಹುದೇ ಕೃತ್ಯ ನೆರೆ ಬಾಂಗ್ಲಾದೇಶದಲ್ಲೂ ನಡೆದಿದೆ.

ಬಾಂಗ್ಲಾದೇಶದ ಖ್ಯಾತ ಲೇಖಕ ಮತ್ತು ಜಾತ್ಯತೀತ ತತ್ವ ಪ್ರತಿಪಾದಿಸುತ್ತಿದ್ದ ಲೇಖಕರೊಬ್ಬರನ್ನು ಅಪರಿಚಿತ ದಾಳಿಕೋರರು ಸೋಮವಾರ ಸಂಜೆ ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಬಿಶಾಕಾ ಪ್ರಕಾಶನದ ಪ್ರಕಾಶಕ ಹಾಗೂ ಲೇಖಕ ಷಹಜಹಾನ್‌ ಬಚ್ಚು (60 ವರ್ಷ) ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ.

ಸಾಮಾಜಿಕ ಕಾರ್ಯಕರ್ತರಾಗಿದ್ದ ಅವರು, ಬಾಂಗ್ಲಾದೇಶ ಕಮ್ಯುನಿಸ್ಟ್‌ ಪಾರ್ಟಿಯ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಮುನ್ಷಿಗಂಜ್‌ ಜಿಲ್ಲೆಯ ಕಾಕಲ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಫ್ತಾರ್‌ ಕೂಟಕ್ಕೂ ಮುನ್ನ, ಬಚ್ಚು ಅವರು ತಮ್ಮ ಸ್ನೇಹಿತನನ್ನು ಭೇಟಿಯಾಗಲು ಅವರ ಔಷಧ ಅಂಗಡಿಗೆ ತೆರಳಿದ್ದಾಗ, ಎರಡು ಬೈಕ್‌ಗಳಲ್ಲಿ ಬಂದ ಐವರು ದುಷ್ಕರ್ಮಿಗಳು ಅವರನ್ನು ಹೊರಗೆಳೆದು ಗುಂಡು ಹಾರಿಸಿದ್ದಾರೆ.

ದಾಳಿ ಮಾಡುವುದಕ್ಕೂ ಮುನ್ನ, ಉಗ್ರಗಾಮಿಗಳು ಔಷಧ ಅಂಗಡಿ ಎದುರು ಕಚ್ಚಾ ಬಾಂಬ್‌ ಸ್ಫೋಟಿಸಿ ಜನರಲ್ಲಿ ಆತಂಕ ಸೃಷ್ಟಿಸಿದ್ದರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಮೇಲ್ನೋಟಕ್ಕೆ ಇದು ಉಗ್ರಗಾಮಿಗಳ ಕೃತ್ಯ ಎಂದು ಹೇಳಲಾಗುತ್ತಿದೆಯಾದರೂ ಮೂಲಭೂತವಾದಿಗಳ ಕೈವಾಡದ ಕುರಿತೂ ಶಂಕೆ ವ್ಯಕ್ತವಾಗುತ್ತಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಬಾಂಗ್ಲಾದೇಶ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಈ ಹಿಂದೆ 2015ರಲ್ಲೂ ಇಂತಹುದೇ ಕೃತ್ಯ ನಡೆದಿತ್ತು. ಖ್ಯಾತ ಲೇಖಕ ಹಾಗೂ ಸಮಾಜವಾದಿ ಪ್ರಕಾಶಕ ಫೈಸಲ್ ಆರ್ಫಿನ್ ಡಿಪಾನ್ ರನ್ನು ಮತ್ತು 2016ರಲ್ಲಿ ಎಜಿಬಿಟಿ ಮ್ಯಾಗಜಿನ್ ನ ಸಂಪಾದಕ ರೂಪ್ ಬನ್ ರನ್ನು ಕೊಲ್ಲಲಾಗಿತ್ತು. ಇದಲ್ಲದೆ ನಾಸ್ತಿಕ ವಾದದ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ನಿಲೋಯ್ ನೀಲ್, ಬ್ಲಾಗರ್ ಅವಿಜಿತ್ ರಾಯ್ ರನ್ನು ಕೊಲ್ಲಲಾಗಿತ್ತು.

Leave A Reply

Your email address will not be published.