EBM News Kannada
Leading News Portal in Kannada

ಗಾಝಾ ಕದನವಿರಾಮ ಎರಡು ದಿನ ವಿಸ್ತರಣೆ

0



ಗಾಝಾ, ನ.28: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷಕ್ಕೆ ವಿರಾಮ ನೀಡುವ ಕದನವಿರಾಮ ಒಪ್ಪಂದ ಎರಡು ದಿನ ವಿಸ್ತರಣೆಗೊಂಡಿದೆ ಎಂದು ಒಪ್ಪಂದದ ಮಧ್ಯಸ್ಥಿಕೆದಾರ ಖತರ್ ಘೋಷಿಸಿದೆ.

ಶುಕ್ರವಾರ ಜಾರಿಗೊಂಡಿದ್ದ ಕದನ ವಿರಾಮ ಮಂಗಳವಾರ ಅಂತ್ಯಗೊಳ್ಳಬೇಕಿತ್ತು. ಆದರೆ ಕಳೆದ 45 ದಿನಗಳಿಂದ ಸಾವಿರಾರು ಜನರ ಸಾವಿಗೆ ಮತ್ತು ನೂರಾರು ಮಂದಿ ಗಾಯಗೊಳ್ಳಲು ಕಾರಣವಾಗಿದ್ದ ಮಾರಣಾಂತಿಕ ಸಂಘರ್ಷಕ್ಕೆ ಮತ್ತೆ ಚಾಲನೆ ದೊರಕುವುದನ್ನು ತಪ್ಪಿಸಲು ಅಂತರಾಷ್ಟ್ರೀಯ ಸಮುದಾಯ ಹೇರಿದ ಒತ್ತಡ ಫಲನೀಡಿದ್ದು ಕದನ ವಿರಾಮ 2 ದಿನ ವಿಸ್ತರಣೆಗೊಂಡಿರುವುದನ್ನು ಹಮಾಸ್ ಮತ್ತು ಇಸ್ರೇಲ್ ದೃಢಪಡಿಸಿವೆ. ಕದನ ವಿರಾಮ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖತರ್ ಕದನ ವಿರಾಮ ವಿಸ್ತರಣೆಗೆ ಎರಡೂ ಪಕ್ಷಗಳನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರದಿಂದ ಮಂಗಳವಾರದವರೆಗಿನ ಅವಧಿಯ ಪ್ರಥಮ ಹಂತದ ಕದನ ವಿರಾಮದಲ್ಲಿ ಹಮಾಸ್ 50 ಒತ್ತೆಯಾಳುಗಳನ್ನು ಮತ್ತು ಇಸ್ರೇಲ್ 150 ಫೆಲೆಸ್ತೀನಿಯನ್ ಕೈದಿಗಳನ್ನು ಬಿಡುಗಡೆಗೊಳಿಸುತ್ತದೆ. ಆರಂಭದ 3 ದಿನದಲ್ಲಿ ಹಮಾಸ್ 39 ಒತ್ತೆಯಾಳುಗಳನ್ನು ಮುಕ್ತಗೊಳಿಸಿದರೆ ಇಸ್ರೇಲ್ 117 ಫೆಲೆಸ್ತೀನಿಯನ್ ಕೈದಿಗಳನ್ನು ಬಿಡುಗಡೆಗೊಳಿಸಿದೆ.

ಕದನ ವಿರಾಮ ಎರಡು ದಿನ ವಿಸ್ತರಣೆಗೊಂಡಿರುವುದನ್ನು ಸ್ವಾಗತಿಸುವುದಾಗಿ ಅಮೆರಿಕದ ಶ್ವೇತಭವನ ಹೇಳಿದ್ದು ಮಾನವೀಯ ವಿರಾಮ ದೀರ್ಘಾವಧಿಗೆ ಮುಂದುವರಿಯುವ ವಿಶ್ವಾಸವಿದೆ ಎಂದಿದೆ. `ಕದನ ವಿರಾಮ ವಿಸ್ತರಣೆ ಶುಭಸಮಾಚಾರ. ಇದೇ ರೀತಿ ದೀರ್ಘಾವಧಿಗೆ ವಿಸ್ತರಣೆಗೊಳ್ಳಲಿ ಎಂದು ಆಶಿಸುತ್ತೇವೆ, ಆದರೆ ಇದು ಹಮಾಸ್‍ನಿಂದ ಒತ್ತೆಯಾಳುಗಳ ಬಿಡುಗಡೆ ಮುಂದುವರಿಯುವುದನ್ನು ಅವಲಂಬಿಸಿದೆ’ ಎಂದು ರಾಷ್ಟ್ರೀಯ ಭದ್ರತಾ ಸಮಿತಿ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.

ಭರವಸೆಯ ಮಿಂಚು: ವಿಶ್ವಸಂಸ್ಥೆ

ಇಸ್ರೇಲ್-ಹಮಾಸ್ ನಡುವಿನ ಕದನ ವಿರಾಮ ಎರಡು ದಿನ ವಿಸ್ತರಣೆಗೊಂಡಿರುವುದನ್ನು ಸ್ವಾಗತಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ `ಇದು ಭರವಸೆಯ ಮಿಂಚು’ ಎಂದು ಬಣ್ಣಿಸಿದ್ದಾರೆ.

ಇದು ಯುದ್ಧದ ಅಂಧಕಾರದ ಮಧ್ಯದಲ್ಲಿ ಮೂಡಿರುವ ಭರವಸೆ ಮತ್ತು ಮಾನವೀಯತೆಯ ಮಿಂಚಾಗಿದೆ. ಮತ್ತು ಗಾಝಾದಲ್ಲಿ ಸಂಕಷ್ಟಪಡುತ್ತಿರುವ ಜನರಿಗೆ ಮಾನವೀಯ ನೆರವನ್ನು ಇನ್ನಷ್ಟು ಹೆಚ್ಚಿಸಲು ಇದು ನಮಗೆ ಅನುವು ಮಾಡಿಕೊಡುವ ವಿಶ್ವಾಸವಿದೆ. ಗಾಝಾದ ಜನರಿಗೆ ತುರ್ತು ಅಗತ್ಯದ ನೆರವನ್ನು ಒದಗಿಸಲು ಇನ್ನಷ್ಟು ಕಾಲಾವಕಾಶದ ಅಗತ್ಯವಿದೆ ‘ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ.

Leave A Reply

Your email address will not be published.