ಕೊಲಂಬೊ: ಪ್ರವಾಸೋದ್ಯಮ ವಲಯವನ್ನು ಉತ್ತೇಜಿಸುವ ಉದ್ದೇಶದಿಂದ ಭಾರತ ಸೇರಿದಂತೆ 6 ದೇಶಗಳ ಪ್ರಜೆಗಳು ತಕ್ಷಣವೇ ಜಾರಿಗೆ ಬರುವಂತೆ ಉಚಿತ ಪ್ರವಾಸೀ ವೀಸಾದ ಸೌಲಭ್ಯವನ್ನು ಪಡೆಯಲಿದ್ದಾರೆ ಎಂದು ಶ್ರೀಲಂಕಾದ ವಲಸೆ ಇಲಾಖೆ ಘೋಷಿಸಿದೆ.
ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾವು 2019ರಿಂದ ತಳಮಟ್ಟಕ್ಕೆ ಕುಸಿದಿರುವ ದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮರು ಚೇತರಿಕೆ ನೀಡುವ ಉದ್ದೇಶದಿಂದ ಭಾರತ, ಚೀನಾ, ರಶ್ಯ, ಮಲೇಶ್ಯಾ, ಜಪಾನ್, ಇಂಡೋನೇಶ್ಯಾ ಮತ್ತು ಥೈಲ್ಯಾಂಡ್ನ ಪ್ರಜೆಗಳಿಗೆ ಉಚಿತ ಪ್ರವಾಸೀ ವೀಸಾ ಒದಗಿಸಲು ಅಕ್ಟೋಬರ್ನಲ್ಲಿ ಶ್ರೀಲಂಕಾದ ಸಚಿವ ಸಂಪುಟ ನಿರ್ಧರಿಸಿತ್ತು. 30 ದಿನ ಶ್ರೀಲಂಕಾದಲ್ಲಿ ಇರಲು ಅವಕಾಶ ಒದಗಿಸುವ ಈ ಯೋಜನೆ 2024ರ ಮಾರ್ಚ್ 31ರವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಮೂಲಗಳು ಹೇಳಿವೆ.