ಉದ್ದೀಪನ ಮದ್ದು ಪರೀಕ್ಷೆ: ಕಾಮನ್ ವೆಲ್ತ್ ಚಿನ್ನದ ಪದಕ ವಿಜೇತೆ ವೇಯ್ಟ್ ಲಿಫ್ಟರ್ ಸಂಜಿತಾ ಚಾನು ಅಮಾನತು
ನವದೆಹಲಿ: ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪರ ಚಿನ್ನದ ಪದಕ ಗೆದಿದ್ದ ವೇಯ್ಟ್ ಲಿಫ್ಟರ್ ಸಂಜಿತಾ ಚಾನು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದು ಅಮಾನತುಗೊಂಡಿದ್ದಾರೆ.
ಸಂಜಿತಾ ಚಾನು ನಿಷೇಧಿತ ಅನಾಬೊಲಿಕ್ ಸ್ಟೈರಾಯಿಡ್ ತೆಗೆದುಕೊಂಡಿರುವುದು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಕಂಡುಬಂದಿದ್ದರಿಂದ ಅವರನ್ನು ಇಂಟರ್ ನ್ಯಾಷನಲ್ ವೇಟ್‌ಲಿಫ್ಟಿಂಗ್ ಫೆಡರೇಷನ್ (IWF) ತಾತ್ಕಾಲಿಕವಾಗಿ ಅಮಾನತು ಮಾಡಿದೆ.
ಪರೀಕ್ಷೆಗಾಗಿ ಚಾನು ಅವರಿಂದ ರಕ್ತ ಮತ್ತು ಮೂತ್ರದ ಮಾದರಿ ಕಲೆಹಾಕಿದ ದಿನಾಂಕವನ್ನು IWF ಬಹಿರಂಗಪಡಿಸಿಲ್ಲ. ಅಂತೆಯೇ ಈ ಪ್ರಕರಣ ಸಂಪೂರ್ಣವಾಗಿ ಇತ್ಯರ್ಥವಾಗುವವರೆಗೂ ಯಾವುದೇ ಹೇಳಿಕೆಗಳನ್ನು ನೀಡಲು ಫೆಡರೇಷನ್ ನಿರಾಕರಿಸಿದೆ.
ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ 53 ಕೆ.ಜಿ.ವಿಭಾಗದಲ್ಲಿ ಸಂಜಿತಾ ಚಾನು ಬಂಗಾರದ ಪದಕ ಜಯಿಸಿದ್ದರು. ಅಂತೆಯೇ ಗ್ಲಾಸ್ಗೊದಲ್ಲಿ 2014ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಚಾನೂ 48 ಕೆ.ಜಿ.ವಿಭಾಗದಲ್ಲಿ ಚಿನ್ನದ ಪದಕ ಬಾಚಿದ್ದರು.