EBM News Kannada
Leading News Portal in Kannada

ಆರ್ಚರಿಯಲ್ಲಿ ಒಲಿಂಪಿಕ್ಸ್ ಕೋಟಾ ಗಿಟ್ಟಿಸಿಕೊಂಡ ಭಾರತ

0


ಹೊಸದಿಲ್ಲಿ: ಸೋಮವಾರ ಬಿಡುಗಡೆಯಾದ ವರ್ಲ್ಡ್ ಆರ್ಚರಿ ರ‍್ಯಾಂಕಿಂಗ್ ಅನ್ನು ಆಧರಿಸಿ ಭಾರತದ ಪುರುಷರ ಹಾಗೂ ಮಹಿಳೆಯರ ಆರ್ಚರಿ ತಂಡವು ಈ ವರ್ಷದ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಆಡುವ ಅರ್ಹತೆ ಪಡೆದುಕೊಂಡಿವೆ.

ಅರ್ಹತೆಗೊಳ್ಳದ ದೇಶಗಳ ಪೈಕಿ ಭಾರತವು ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನ ಪಡೆದಿದ್ದು, ಪುರುಷರ ಹಾಗೂ ಮಹಿಳೆಯರ ಎರಡೂ ತಂಡಗಳು ಟೀಮ್ ಕೋಟಾಗಳನ್ನು ಗಿಟ್ಟಿಸಿಕೊಂಡಿವೆ.

ಭಾರತವು ಪ್ಯಾರಿಸ್ ನಲ್ಲಿ ಪುರುಷರ ಹಾಗೂ ಮಹಿಳೆಯರ ಟೀಮ್ಗಳು, ವೈಯಕ್ತಿಕ ಹಾಗೂ ಮಿಶ್ರ ವಿಭಾಗಗಳು ಸೇರಿದಂತೆ ಎಲ್ಲ ಐದು ಪದಕ ಸ್ಪರ್ಧೆಗಳಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದಿದೆ.

ಪುರುಷರ ವಿಭಾಗದಲ್ಲಿ ಭಾರತ ಹಾಗೂ ಚೀನಾ ಸ್ಥಾನ ಗಿಟ್ಟಿಸಿಕೊಂಡರೆ, ಮಹಿಳೆಯರ ವಿಭಾಗದಲ್ಲಿ ಇಂಡೋನೇಶ್ಯ ತಂಡ ಟೀಮ್ ಒಲಿಂಪಿಕ್ಸ್ ಕೋಟಾ ಗಿಟ್ಟಿಸಿಕೊಂಡ ಎರಡನೇ ದೇಶವಾಗಿದೆ.

ಟೀಮ್ ಸ್ಪರ್ಧೆಗಳಲ್ಲಿ ಪ್ರತಿ ವಿಭಾಗದಲ್ಲಿ 12 ತಂಡಗಳು ಇರುತ್ತವೆ. ಐದು ತಂಡಗಳು ಮಿಕ್ಸೆಡ್ ಸ್ಫರ್ಧಾವಳಿ ಇರುತ್ತವೆ. ಮೂರು ಹಂತದ ಒಲಿಂಪಿಕ್ಸ್ ಕ್ವಾಲಿಫೈಯರ್ಗಳ ನಂತರ ಇದೇ ಮೊದಲ ಬಾರಿ ಅಗ್ರ ಎರಡು ದೇಶಗಳಿಗೆ ಟೀಮ್ ಕೋಟಾಗಳನ್ನು ನೀಡಲಾಗಿದೆ.

ಕಳೆದ ವರ್ಷ ಬರ್ಲಿನ್ ನಲ್ಲಿ ವರ್ಲ್ಡ್ ಆರ್ಚರಿ ಚಾಂಪಿಯನ್ ಶಿಪ್ ವೇಳೆ ಮೊದಲ ಒಲಿಂಪಿಕ್ಸ್ ಕ್ವಾಲಿಫೈಯರ್ ನಡೆದಿದ್ದು ದಕ್ಷಿಣ ಕೊರಿಯಾ, ಟರ್ಕಿ ಹಾಗೂ ಜಪಾನ್ ಪುರುಷರ ವಿಭಾಗದಲ್ಲಿ ಅರ್ಹತೆ ಪಡೆದಿದ್ದವು. ಜರ್ಮನಿ ಹಾಗೂ ಮೆಕ್ಸಿಕೊ ಮಹಿಳೆಯರ ವಿಭಾಗದಲ್ಲಿ ಅರ್ಹತೆ ಗಿಟ್ಟಿಸಿಕೊಂಡಿದ್ದವು.

► ತರುಣ್, ದೀಪಿಕಾ ಕುಮಾರಿಗೆ 4ನೇ ಒಲಿಂಪಿಕ್ ಗೇಮ್ಸ್

40 ವರ್ಷದ ಹಿರಿಯ ಯೋಧ ತರುಣ್ದೀಪ್ ರಾಯ್ 2004ರ ಅಥೆನ್ಸ್ ಗೇಮ್ಸ್ ನಲ್ಲಿ ಒಲಿಂಪಿಕ್ಸ್ ಗೆ ಕಾಲಿಟ್ಟಿದ್ದು, ಇದೀಗ ನಾಲ್ಕನೇ ಬಾರಿ ಗೇಮ್ಸ್ ನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ.

ವಿಶ್ವದ ಮಾಜಿ ನಂ.1 ಆಟಗಾರ್ತಿ ದೀಪಿಕಾ ಕುಮಾರಿ ಸತತ ನಾಲ್ಕನೇ ಬಾರಿ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಲಿದ್ದಾರೆ. 2012ರಲ್ಲಿ ಲಂಡನ್ನಲ್ಲಿ ನಡೆದ ಗೇಮ್ಸ್ ನಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದರು.

ಧೀರಜ್ ಬೊಮ್ಮದೇವರ, ಅಂಕಿತಾ ಭಕತ್ ಹಾಗೂ ಭಜನ್ ಕೌರ್ ಚೊಚ್ಚಲ ಒಲಿಂಪಿಕ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರವೀಣ್ ಜಾಧವ್ ಟೋಕಿಯೊ ನಂತರ ಸತತ ಎರಡನೇ ಗೇಮ್ಸ್ ನಲ್ಲಿ ಆಡಲಿದ್ದಾರೆ.

ಭಾರತ ತಂಡ

ಪುರುಷರ ವಿಭಾಗ: ತರುಣ್ದೀಪ್ ರಾಯ್, ಧೀರಜ್ ಬೊಮ್ಮದೇವರ ಹಾಗೂ ಪ್ರವೀಣ್ ಜಾಧವ್.

ಮಹಿಳೆಯರ ವಿಭಾಗ: ದೀಪಿಕಾ ಕುಮಾರಿ, ಭಜನ್ ಕೌರ್ ಹಾಗೂ ಅಂಕಿತಾ ಭಕತ್.

Leave A Reply

Your email address will not be published.