EBM News Kannada
Leading News Portal in Kannada

ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಭಾರತ ತಂಡವು ಪಾಕಿಸ್ತಾನಕ್ಕೆ ಬರುವುದನ್ನು ನಿರೀಕ್ಷಿಸುವೆ : ವಸೀಮ್ ಅಕ್ರಮ್

0


ಲಾಹೋರ್ : 2025ರಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ಒಪ್ಪುತ್ತದೆ ಎಂಬ ಭರವಸೆಯನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಸೀಮ್ ಅಕ್ರಮ್ ವ್ಯಕ್ತಪಡಿಸಿದ್ದಾರೆ. ಈ ಪಂದ್ಯಾವಳಿಯನ್ನು ಆಯೋಜಿಸುವುದು ಪಾಕಿಸ್ತಾನಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ಭಾರತವು ತನ್ನ ನೆರೆ ದೇಶಕ್ಕೆ ಹೋಗುವುದೇ, ಇಲ್ಲವೇ ಎಂಬ ಊಹಾಪೋಹಗಳ ನಡುವೆ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಪಂದ್ಯಾವಳಿಯು ಪಾಕಿಸ್ತಾನದಲ್ಲಿ ಮುಂದಿನ ವರ್ಷದ ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ನಡೆಯಲು ನಿಗದಿಯಾಗಿದೆ. ಇದರಲ್ಲಿ ಆತಿಥೇಯ ಪಾಕಿಸ್ತಾನವಲ್ಲದೆ, ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್, ದಕ್ಷಿಣ ಆಫ್ರಿಕ, ಬಾಂಗ್ಲಾದೇಶ, ನ್ಯೂಝಿಲ್ಯಾಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ.

ಆದರೆ, ಭಾರತ ಮತ್ತು ಪಾಕಿಸ್ತಾನಗಳ ನಡುವಿನ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಈ ಪಂದ್ಯಾವಳಿಯಲ್ಲಿ ಭಾರತ ಪಾಲ್ಗೊಳ್ಳುವುದು ಇನ್ನೂ ಅನಿಶ್ಚಿತವಾಗಿದೆ.

ಈ ಪ್ರಮಾಣದ ಪಂದ್ಯಾವಳಿಯೊಂದರ ಆಯೋಜನೆಯು ದೇಶದಲ್ಲಿ ಕ್ರಿಕೆಟ್‌ ನ ಬೆಳವಣಿಗೆಗೆ ನೆರವು ನೀಡುತ್ತದೆ ಎಂದು ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ. ‘‘ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಭಾರತ ಪಾಕಿಸ್ತಾನಕ್ಕೆ ಬರುತ್ತದೆ ಎಂದು ನಾನು ಆಶಿಸುತ್ತೇನೆ. ಎಲ್ಲಾ ತಂಡಗಳನ್ನು ಸ್ವಾಗತಿಸಲು ಇಡೀ ದೇಶ ಎದುರು ನೋಡುತ್ತಿದೆ. ಈ ತಂಡಗಳ ಆಗಮನದಿಂದ ಕ್ರಿಕೆಟ್‌ ನ ಸ್ಥಾನ ಉನ್ನತ ಮಟ್ಟಕ್ಕೇರುತ್ತದೆ. ನಾವು ತಂಡಗಳಿಗೆ ಭವ್ಯ ಸ್ವಾಗತ ನೀಡಲು ಸಿದ್ಧರಾಗಿದ್ದೇವೆ. ನಮ್ಮಲ್ಲಿ ಶ್ರೇಷ್ಠ ಕ್ರೀಡಾಂಗಣಗಳಿವೆ. ನಾವು ಹೊಸ ಸ್ಟೇಡಿಯಮ್‌ ಗಳನ್ನು ನಿರ್ಮಿಸುತ್ತಿದ್ದೇವೆ. ಲಾಹೋರ್, ಕರಾಚಿ ಮತ್ತು ಇಸ್ಲಾಮಾಬಾದ್ ಗಳಲ್ಲಿ ನಿರ್ಮಿಸಲಾಗುವ ನೂತನ ಸ್ಟೇಡಿಯಮ್‌ ಗಳ ಕಾಮಗಾರಿ ಆರಂಭಗೊಂಡಿದೆ. ಹಾಗಾಗಿ, ಇದೊಂದು ಭವ್ಯ ಪಂದ್ಯಾವಳಿ ಆಗಲಿದೆ ಎಂದು ನಾನು ಭಾವಿಸಿದ್ದೇನೆ. ದೇಶದಲ್ಲಿ ಕ್ರಿಕೆಟನ್ನು ಉನ್ನತ ಮಟ್ಟಕ್ಕೆ ಒಯ್ಯಲು ಪಾಕಿಸ್ತಾನಕ್ಕೆ ಈ ಪಂದ್ಯಾವಳಿಯ ಅಗತ್ಯವಿದೆ. ಎಲ್ಲಾ ತಂಡಗಳು ಆಗಮಿಸುತ್ತವೆ ಎಂದು ನಾನು ಆಶಿಸುತ್ತೇನೆ. ಯಾಕೆಂದರೆ, ಕ್ರಿಕೆಟ್ ಮತ್ತು ರಾಜಕೀಯವನ್ನು ಯಾವಾಗಲೂ ಪ್ರತ್ಯೇಕಿಸಬೇಕು’’ ಎಂದು ಅಕ್ರಮ್ ಹೇಳಿರುವುದಾಗಿ ಐಎಎನ್ಎಸ್ ವರದಿ ಮಾಡಿದೆ.

2006ರ ಬಳಿಕ, ಭಾರತವು ದ್ವಿಪಕ್ಷೀಯ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಿಲ್ಲ. ಉಭಯ ದೇಶಗಳ ನಡುವಿನ ಉದ್ವಿಗ್ನ ರಾಜಕೀಯ ಸಂಬಂಧಗಳ ಹಿನ್ನೆಲೆಯಲ್ಲಿ, 2013ರ ಬಳಿಕ ಉಭಯ ತಂಡಗಳು ಐಸಿಸಿ ಪಂದ್ಯಾವಳಿಗಳಲ್ಲಿ ಮಾತ್ರ ಪರಸ್ಪರರ ಜೊತೆಗೆ ಆಡುತ್ತಿವೆ.

Leave A Reply

Your email address will not be published.