EBM News Kannada
Leading News Portal in Kannada

ಕ್ರಿಕೆಟಿಗರು ಮನುಷ್ಯರೇ ಹೊರತು ರೋಬೋಟ್‌ಗಳಲ್ಲ: ಆಸ್ಟ್ರೇಲಿಯ ನಾಯಕ ಪ್ಯಾಟ್ ಕಮಿನ್ಸ್

0



ಸಿಡ್ನಿ: ಆಸ್ಟ್ರೇಲಿಯ ತಂಡವು 50 ಓವರ್‌ಗಳ ವಿಶ್ವಕಪ್ ವಿಜಯದ ಬೆನ್ನಿಗೆ ಟ್ವೆಂಟಿ-20 ಸರಣಿಯನ್ನು ಆಡುತ್ತಿದ್ದು ಸದ್ಯ ಸರಣಿಯ ಮೊದಲೆರಡು ಪಂದ್ಯಗಳನ್ನು ಸೋತು ಗೆಲುವಿಗಾಗಿ ಪರದಾಟ ನಡೆಸುತ್ತಿದೆ. ಇದನ್ನು ಉಲ್ಲೇಖಿಸಿ ಮಾತನಾಡಿರುವ ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್, ಕ್ರಿಕೆಟ್ ಆಟಗಾರರು ಮನುಷ್ಯರೇ ಹೊರತು ರೋಬೋಟ್‌ಗಳಲ್ಲ ಎಂದು ಹೇಳಿದ್ದಾರೆ.

ನ.19ರಂದು ವಿಶ್ವಕಪ್ ಫೈನಲ್ ಕೊನೆಗೊಂಡ ನಾಲ್ಕು ದಿನಗಳ ನಂತರ ಭಾರತದಲ್ಲಿ 5 ಪಂದ್ಯಗಳ ಟ್ವೆಂಟಿ-20 ಸರಣಿ ಆರಂಭವಾಗಿದೆ. ವಿಶ್ವಕಪ್ ವಿಜೇತ ಆಸೀಸ್ ತಂಡದ 7 ಸದಸ್ಯರು ಸ್ವದೇಶಕ್ಕೆ ವಾಪಸಾಗದೆ ಭಾರತದಲ್ಲಿ ಉಳಿದಿದ್ದರು.

ಭಾರತವು ಸರಣಿಯ ಮೊದಲೆರಡು ಪಂದ್ಯಗಳನ್ನು ಜಯಿಸಿದ ನಂತರ ಆಸ್ಟ್ರೇಲಿಯವು ಬಲವರ್ಧನೆಗೆ ಮುಂದಾಗಿದ್ದು, ಸದ್ಯ ರನ್‌ಗಾಗಿ ಪರದಾಡುತ್ತಿರುವ ವಿಶ್ವಕಪ್ ಹೀರೊಗಳಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ. ಬೆನ್ ಮೆಕ್‌ಡರ್ಮಾಟ್, ಜೋಶ್ ಫಿಲಿಪ್ ಹಾಗೂ ಕ್ರಿಸ್ ಗ್ರೀನ್ ಅವರು ಬದಲಿ ಆಟಗಾರರಾಗಿ ತಂಡವನ್ನು ಸೇರಲಿದ್ದಾರೆ ಎಂದು ವರದಿಯಾಗಿದೆ.

ಅಂತ್ಯವಿಲ್ಲದ ಕೆಲಸದ ಹೊರೆ: ಸೆಪ್ಟಂಬರ್‌ನಿಂದ ಭಾರತದಲ್ಲಿ ಆಡುತ್ತಿರುವ ಕೆಲವು ಕ್ರಿಕೆಟಿಗರು ಪಾಕಿಸ್ತಾನ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ ಟೆಸ್ಟ್ ಸರಣಿಗಳು ಸೇರಿದಂತೆ ಬಿಡುವಿಲ್ಲದೆ ದೇಶೀಯ ಕ್ರಿಕೆಟ್ ಸಮ್ಮರ್ ಅನ್ನು ಹೊಂದಿದ್ದಾರೆ. ಆಟಗಾರರ ಮೇಲೆ ಒತ್ತಡವಿದೆ ಎಂಬ ವಿಚಾರವನ್ನು ನಾಯಕ ಕಮಿನ್ಸ್ ಒಪ್ಪಿಕೊಂಡಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಕಮಿನ್ಸ್ ತನ್ನ ಸಹ ಆಟಗಾರರ ಬೆಂಬಲಕ್ಕೆ ನಿಂತರು.

ಕ್ರಿಕೆಟಿಗರು ಮನುಷ್ಯರು, ಅವರು ರೋಬೋಟ್‌ಗಳಲ್ಲ. ವಿಶ್ವಕಪ್ ಗೆಲ್ಲಲು ಶಕ್ತಿಮೀರಿ ಶ್ರಮಿಸಿರುವ ಆಟಗಾರರು ವಿಶ್ವಕಪ್ ಮುಗಿದ ಕೆಲವೇ ದಿನಗಳಲ್ಲಿ ಟಿ-20 ಕ್ರಿಕೆಟ್ ಆಡುವುದು ಸುಲಭದ ಮಾತಲ್ಲ. ಒಂದು ವೇಳೆ ಆಟಗಾರರು ನೂರು ಪ್ರತಿಶತ ಫಿಟ್ ಇಲ್ಲದಿದ್ದರೆ ನಾನು ಅವರನ್ನು ದೂಷಿಸಲಾರೆ. ಇವರಿಗೆ ಆಸ್ಟ್ರೇಲಿಯ ಪರ ಆಡಲು ಸಾಕಷ್ಟು ಪಂದ್ಯಗಳು ಬಾಕಿ ಇದೆ. ಈ ಪ್ರವಾಸವು ಕೆಲವು ಯುವ ಆಟಗಾರರಿಗೆ ಉತ್ತಮ ಅವಕಾಶ ಒದಗಿಸಲಿದೆ ಎಂದು ಕಮಿನ್ಸ್ ಹೇಳಿದ್ದಾರೆ.

ಡೇವಿಡ್ ವಾರ್ನರ್ ಭವಿಷ್ಯ: ಭಾರತ ವಿರುದ್ಧ ಸರಣಿಗೆ ಮೊದಲು ಟ್ವೆಂಟಿ-20 ತಂಡದಿಂದ ಹೊರಗುಳಿದಿರುವ ಹಿರಿಯ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಪಾಕಿಸ್ತಾನ ವಿರುದ್ಧ ಸರಣಿಯ ನಂತರ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆ ಇದೆ.

37ರ ಹರೆಯದ ವಾರ್ನರ್ ಇತ್ತೀಚೆಗೆ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಒಟ್ಟು 535 ರನ್ ಗಳಿಸಿ ಆಸ್ಟ್ರೇಲಿಯದ ಪರ ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ರನ್ ಬರ ಎದುರಿಸುತ್ತಿರುವ ವಾರ್ನರ್ ಸ್ಥಾನ ಪಡೆಯುವ ಬಗ್ಗೆ ಅನುಮಾನವಿದೆ.

ಪ್ರಸಕ್ತ ವಾರ್ನರ್ ಅವರು ಚೆಂಡನ್ನು ಸೊಗಸಾಗಿ ಆಡುತ್ತಿದ್ದಾರೆ. ಅಲ್ಲಿ ಅವರು ಕೇವಲ ತನಗಾಗಿ ಆಡುತ್ತಿರಲಿಲ್ಲ. ತಂಡಕ್ಕಾಗಿ ಆಡುತ್ತಿದ್ದರು. ಅವರು ನಿಜವಾಗಿಯೂ ಧೈರ್ಯಶಾಲಿ. ಎದುರಾಳಿ ತಂಡವನ್ನು ದಿಟ್ಟವಾಗಿ ಎದುರಿಸುತ್ತಿದ್ದಾರೆ ಎಂದು ಭಾರತದಲ್ಲಿ ವಾರ್ನರ್ ಪ್ರದರ್ಶನದ ಬಗ್ಗೆ ಕಮಿನ್ಸ್ ಪ್ರತಿಕ್ರಿಯಿಸಿದರು.

ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿ: ಪಾಕಿಸ್ತಾನ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 14ರಂದು ಪರ್ತ್‌ನಲ್ಲಿ ಆರಂಭವಾಗಲಿದೆ. ಮೆಲ್ಬೋರ್ನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ನಡೆಯಲಿದೆ. ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ವಾರ್ನರ್ ಅವರ ತವರು ಮೈದಾನವಾದ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ 2024ರ ಜನವರಿ 3ರಂದು ನಡೆಯಲಿದೆ.

Leave A Reply

Your email address will not be published.