EBM News Kannada
Leading News Portal in Kannada

ಲಾಕ್​ಡೌನ್ ವಿಷಯದಲ್ಲಿ ಲಾಕ್ ಆಗಿರುವ ಕೇಂದ್ರ ಸರ್ಕಾರ; ಮೇ 3ರ ಬಳಿಕ ಏನಾಗಲಿದೆ ಪರಿಸ್ಥಿತಿ?

0

ನವದೆಹಲಿ: ವ್ಯಾಪಕವಾಗಿ ಹರಡುತ್ತಿದ್ದ ಕೊರೋನಾ ಸೋಂಕು ಕೊನೆಗಾಣಿಸಬೇಕೆಂದು ಜಾರಿಗೊಳಿಸಲಾದ ಲಾಕ್​ಡೌನ್ ಮೇ 3ಕ್ಕೆ ಮುಕ್ತಾಯಗೊಳ್ಳಲಿದೆ. ಆದರೆ, ಕೊರೋನಾ ಸೋಂಕು ಮಾತ್ರ ನಿಯಂತ್ರಣಕ್ಕೆ ಬರುವ ಲಕ್ಷಣಗಳೇ ಕಾಣುತ್ತಿಲ್ಲ. ಹಾಗಾಗಿ ಮೇ 3ರ ಬಳಿಕ‌ ಲಾಕ್​ಡೌನ್ ಮುಂದುವರೆಸಬೇಕೋ ಬೇಡವೋ ಎಂಬ ಸಂಗತಿ ಕೇಂದ್ರ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.

ಲಾಕ್​ಡೌನ್ ತೆರವುಗೊಳಿಸಬೇಕು ಎಂಬ ಸಲಹೆ, ಶಿಫಾರಸು, ಒತ್ತಡಗಳು ದಂಡಿ ದಂಡಿಯಾಗಿ ಬರುತ್ತಿವೆ. ಆದರೆ ಲಾಕ್​ಡೌನ್ ಅನ್ನು ಲಿಫ್ಟ್ ಮಾಡುವುದು ಹೇಗೆ ಎಂಬುದೇ ಸಮಸ್ಯೆಯಾಗಿದೆ. ಏಕೆಂದರೆ ಲಾಕ್​ಡೌನ್ ತೆರೆವುಗೊಳಿಸಿದರೆ ಕೊರೋನಾ ಸೋಂಕು ಹರಡುವಿಕೆ ಇನ್ನಷ್ಟು ತೀವ್ರಗೊಳ್ಳಬಹುದು ಎಂಬ ಭಯ ಕೇಂದ್ರ ಸರ್ಕಾರವನ್ನು ಕಾಡುತ್ತಿದೆ.

ಇನ್ನೊಂದೆಡೆ ಲಾಕ್​ಡೌನ್ ಮುಂದುವರೆಸಿದ್ದೇಯಾದರೆ ಈಗಾಗಲೇ ಬಿದ್ದುಹೋಗಿರುವ ದೇಶದ ಆರ್ಥಿಕತೆ ಮತ್ತು ಉತ್ಪಾದನೆಗಳು ಮತ್ತಷ್ಟು ಪ್ರಪಾತಕ್ಕೆ ಕುಸಿಯಲಿವೆ ಎಂಬ ಆತಂಕವೂ ಕಾಡುತ್ತಿದೆ. ಆದುದರಿಂದ ಕೊರೋನಾ ಸೋಂಕು ಹರಡುವಿಕೆಯನ್ನು ನಿಯಂತ್ರಣ ಮಾಡಲೂ ಬೇಕು ಹಾಗೂ ಜತೆಜತೆಗೆ ಕೃಷಿ, ಕೈಗಾರಿಕೆ, ವ್ಯಾಪಾರ, ವ್ಯವಹಾರ ಮತ್ತಿತರ ಚಟುವಟಿಕೆಗಳಿಗೆ ಚಾಲನೆಯನ್ನೂ ನೀಡಬೇಕಾಗಿದೆ. ಅದು ಹೇಗೆ? ಎಂಬ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಕಸರತ್ತು ನಡೆಸುತ್ತಿದ್ದಾರೆ.

ಈಗಾಗಲೇ ಹಸಿರು ವಲಯ ಎಂದು ಗುರುಸಿರುವ ಕಡೆಗಳಲ್ಲಿ ಕೃಷಿ, ಕೈಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ ಚಟುವಟಿಕೆಗಳಿಗೆ ಅವಕಾಶ ನೀಡಿ ಲಾಕ್​ಡೌನ್ ನಿಯಮಗಳ ಚರ್ಚೆ ಸಡಿಲಿಸಲಾಗಿದೆ. ಆದರೆ ಅಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಯಾವ ಚಟುವಟಿಕೆಗಳು ಆರಂಭವಾಗಿಲ್ಲ. ಕೊರೋನಾ ಸೋಂಕು ಹರಡುವಿಕೆ ಬಗ್ಗೆ ಜನರಿಗಿರುವ ಭಯ ಒಂದು ಕಡೆಯಾದರೆ ಕೃಷಿ, ಕೈಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ ಚಟುವಟಿಕೆಗಳಿಗೆ ಪೂರಕವಾಗಿ ಬೇರೆ ಬೇರೆ ವಲಯಗಳಿ‌ಂದ ಸರಕು ಸಾಗಾಣೆ ಸುಗಮವಾಗಿ ಆಗದೇ ಇರುವುದು ಮತ್ತು ಕಾರ್ಮಿಕರ ಸಂಚಾರ ಸಾಧ್ಯವಾಗದಿರುವುದು ಸಮಸ್ಯೆ ಆಗುತ್ತಿದೆ.

ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬೇರೆ ವಲಯಗಳಲ್ಲೂ ನಿಯಮ ಸಡಿಲಿಸಿದರೆ ಮಾತ್ರ ಕೆಲಸ ಸುಗಮ ಆಗಲಿದೆ ಎಂಬುದು ಮನವರಿಕೆಯಾಗಿದೆ. ಈ ಪೈಕಿ ಹಳದಿ ವಲಯದಲ್ಲಿ ಹೇಗೋ ಲಾಕ್​ಡೌನ್ ನಿಯಮಗಳನ್ನು ಸಡಿಲಿಸಬಹುದು. ಆದರೆ ಕಂಡು ಕಂಡು ಕೊರೋನಾ ನಿಯಂತ್ರಣಕ್ಕೆ ಬಾರದ ಕೆಂಪು ವಲಯಗಳಲ್ಲಿ ಮುಕ್ತ ಅವಕಾಶ ಕಲ್ಪಿಸುವುದಾದರೂ ಹೇಗೆ ಎಂಬುದು ಅಧಿಕಾರಿಗಳಿಗೆ ತಲೆಬಿಸಿಯಾಗಿದೆ‌.

ಸದ್ಯ ಪ್ರಧಾನ ಮಂತ್ರಿಗಳ ಕಚೇರಿಯ ಉನ್ನತ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದು, ಮೇ 3ರ ಬಳಿಕ ದೇಶಾದ್ಯಂತ ಒಮ್ಮೆಲೆ ಲಾಕ್​ಡೌನ್ ತೆರವುಗೊಳಿಸುವ ಕುರಿತಾದ ಮುಂದಿನ ಕಾರ್ಯತಂತ್ರ ರೂಪಿಸುವುದರಲ್ಲಿ ನಿರತರಾಗಿದ್ದಾರೆ.

Leave A Reply

Your email address will not be published.