EBM News Kannada
Leading News Portal in Kannada

ಕೊರೋನಾ ಇಂದು- ನಾಳೆ ಹೋಗುವ ವೈರಸ್​ ಅಲ್ಲ, ತುಂಬ ಸಮಯ ನಮ್ಮೊಂದಿಗೆ ಇರಲಿದೆ; WHO ಎಚ್ಚರಿಕೆ

0

ವಿಶ್ವಾದ್ಯಂತ 1.84 ಲಕ್ಷ ಜನರನ್ನು ಬಲಿ ಪಡೆದಿರುವ ಕೊರೋನಾ ಸೋಂಕಿನಿಂದ 26.36 ಲಕ್ಷ ಜನ ಬಳಲುತ್ತಿದ್ದಾರೆ. ಬಹುತೇಕ ಎಲ್ಲ ದೇಶಗಳಲ್ಲೂ ಸಾವಿನ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್​ ಅಷ್ಟು ಸುಲಭವಾಗಿ ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್​ಓ) ನಿರ್ದೇಶಕ ಟೆಡ್ರಾಸ್ ಅಧನಾಮ್ ಗೆಬ್ರೆಯೆಸಸ್, ಬಹುತೇಕ ದೇಶಗಳು ತಾವು ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸಿದ್ದೇವೆ. ತಮ್ಮ ರಾಷ್ಟ್ರ ಕೊರೋನಾದಿಂದ ಮುಕ್ತವಾಗುತ್ತಿದೆ ಎಂದು ನಂಬಿಕೊಂಡಿವೆ. ಆದರೆ, ಕೊರೋನಾ ಸೋಂಕು ಇನ್ನೂ ಸಾಕಷ್ಟು ಸಮಯದವರೆಗೆ ಈ ಭೂಮಿ ಮೇಲೆ ಉಳಿದಿರುತ್ತದೆ. ಕೊರೋನಾ ವಿರುದ್ಧ ಹೋರಾಡಲು ಸಿದ್ಧ ಎಂದಿದ್ದ ಅಮೆರಿಕ, ಆಫ್ರಿಕಾದಂತಹ ದೇಶಗಳಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂದಿದ್ದಾರೆ.

ಕೊರೋನಾ ಆಪತ್ತನ್ನು ಮೊದಲೇ ಅರಿತಿದ್ದ ವಿಶ್ವ ಆರೋಗ್ಯ ಸಂಸ್ಥೆ ಜನವರಿ 30ರಂದೇ ಕೊರೋನಾ ವೈರಸ್​ ಅನ್ನು ಜಾಗತಿಕ ತುರ್ತು ಆರೋಗ್ಯ ಸಮಸ್ಯೆ ಎಂದು ಘೋಷಿಸಿತ್ತು. ಜಗತ್ತಿನ ಹಲವು ದೇಶಗಳಲ್ಲಿ ಕೊರೋನಾ ವೈರಸ್‌ ಇನ್ನೂ ಆರಂಭಿಕ ಹಂತದಲ್ಲಿದೆ. ಇನ್ನು ಕೆಲವು ದೇಶಗಳಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆರಂಭಿಕ ಹಂತದಲ್ಲಿರುವ ದೇಶಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬರಲು ಇನ್ನೂ ಸಾಕಷ್ಟು ಸಮಯ ಬೇಕು. ಹೀಗಾಗಿ, ಕೊರೋನಾ ವಿರುದ್ಧದ ಹೋರಾಟ ಸದ್ಯಕ್ಕೆ ಕೊನೆಯಾಗುವುದಿಲ್ಲ ಎಂದಿದ್ದಾರೆ.

ವಿಶ್ವಾದ್ಯಂತ ಸುಮಾರು 2 ಲಕ್ಷ ಜನರು ಕೊರೋನಾಗೆ ಬಲಿಯಾಗಿದ್ದಾರೆ. ಕೊರೋನಾ ಬಗ್ಗೆ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಅದಕ್ಕೆ ಸಾಕಷ್ಟು ಜನರು ಬೆಲೆ ತೆರಬೇಕಾಗುತ್ತದೆ. ಹೀಗಾಗಿ, ನಮ್ಮ ಆರೋಗ್ಯ ಮತ್ತು ಸುತ್ತಲಿನವರ ಸುರಕ್ಷತೆಯ ದೃಷ್ಟಿಯಿಂದ ಮನೆಗಳಿಂದ ಹೊರಗೆ ಹೋಗದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಇನ್ನು ನಮ್ಮಿಂದ ಈ ನಿಟ್ಟಿನಲ್ಲಿ ಯಾವುದೇ ತಪ್ಪುಗಳು ಸಂಭವಿಸದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಟೆಡ್ರಾಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Leave A Reply

Your email address will not be published.