ರಾಜ್ಯದಲ್ಲಿ 16 ಹೊಸ ಪ್ರಕರಣ; ಬೆಂಗಳೂರಿನ ವಿದ್ಯಾಜ್ಯೋತಿನಗರ ಈಗ ಹೊಸ ಕರೋನಾ ಅಡ್ಡೆ
ಬೆಂಗಳೂರು(ಏ. 23): ತಬ್ಲಿಘಿ ಜಮಾತ್, ಜುಬಿಲೆಂಟ್ ಫಾರ್ಮಾ ನಂತರ ಈಗ ಬೆಂಗಳೂರಿನ ವಿದ್ಯಾಜ್ಯೋತಿ ನಗರ ಬಡಾವಣೆ ಮತ್ತೊಂದು ಕೊರೋನಾ ಅಡ್ಡೆಯಾಗಿದೆ. ಇಲ್ಲಿ 9 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಬೊಮ್ಮನಹಳ್ಳಿಯ ಹೊಂಗಸಂದ್ರ ವಾರ್ಡ್ನದಲ್ಲಿರುವ ಈ ಬಡವಾವಣೆಯ ನೂರಕ್ಕೂ ಹೆಚ್ಚು ಜನರನ್ನು ಇವತ್ತು ಕ್ವಾರಂಟೈನ್ಗೆ ಕರೆದೊಯ್ಯಲಾಗಿದೆ. ಅವರ ಸ್ಯಾಂಪಲ್ಗಳ ಪರೀಕ್ಷೆಯಲ್ಲಿ 9 ಮಂದಿಗೆ ಪಾಸಿಟಿವ್ ಇರುವುದು ಖಚಿತವಾಗಿದೆ. ಇಂದು ಸಂಜೆಯೊಳಗೆ ಇನ್ನಷ್ಟು ಪರೀಕ್ಷೆಗಳ ವರದಿ ಬರಲಿದೆ. ಇನ್ನಷ್ಟು ಪಾಸಿಟಿವ್ ಕೇಸ್ ಬರುವ ನಿರೀಕ್ಷೆ ಇದೆ. ಇಡೀ ಬಡವಾಣೆಯ ಜನರನ್ನ ಬಿಬಿಎಂಪಿ ಖಾಲಿ ಮಾಡಿಸುತ್ತಿದೆ.
ವಿದ್ಯಾಜ್ಯೋಗಿ ನಗರ ಲೇಔಟ್ನಲ್ಲಿ ಕ್ವಾರಂಟೈನ್ನಲ್ಲಿರುವ ಎಲ್ಲರೂ ಕೂಡ ಕೂಲಿ ಕಾರ್ಮಿಕರೇ ಆಗಿದ್ದಾರೆ. ನಿನ್ನೆ SARI ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಪಿ-419 ರೋಗಿಯ ಸಂಪರ್ಕಕ್ಕೆ ಇವರೆಲ್ಲರೂ ಬಂದಿರುವುದು ತಿಳಿದುಬಂದಿತ್ತು. ಹಾಗಾಗಿ ಎಲ್ಲರನ್ನೂ ಕ್ವಾರಂಟೈನ್ಗೆ ಹಾಕಲಾಗಿದೆ. ಈ 9 ಮಂದಿಗೆ ಪಾಸಿಟಿವ್ ಬಂದಿರುವುದು ಆತಂಕ ತಂದಿದೆ. ಈ ಕೂಲಿ ಕಾರ್ಮಿಕರೆಲ್ಲರಿಗೂ ಪ್ರತೀ ದಿನ ಅನೇಕ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳು ಉಚಿತ ಆಹಾರ, ದಿನಸಿ ವಿತರಣೆ ಮಾಡುತ್ತಿದ್ದರು. ಈಗ ಅವರನ್ನೆಲ್ಲಾ ಹುಡುಕಿ ತಪಾಸಣೆ ಮಾಡಲು ಬಿಬಿಎಂಪಿ ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಈ 9 ಪಾಸಿಟಿವ್ ಕೇಸ್ ಸೇರಿ ಒಟ್ಟು ಕೊರೋನಾ ಸೋಂಕು ಪ್ರಕರಣ ಶತಕ(100) ಮುಟ್ಟಿದೆ. ರಾಜ್ಯಾದ್ಯಂತ ನಿನ್ನೆ ಸಂಜೆ 5ಗಂಟೆಯಿಂದ ಇಲ್ಲಿವರೆಗೆ ಬೆಂಗಳೂರಿನ ಈ 9 ಪ್ರಕರಣ ಸೇರಿ ಒಟ್ಟು 16 ಹೊಸ ಪ್ರಕರಗಳು ಬೆಳಕಿಗೆ ಬಂದಿವೆ. ಅಲ್ಲಿಗೆ ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣ 443ಕ್ಕೆ ಏರಿದೆ. ಇವರ ಪೈಕಿ 17 ಮಂದಿ ಸಾವನ್ನಪ್ಪಿದ್ದರೆ 141 ಮಂದಿ ಗುಣಮುಖರಾಗಿದ್ಧಾರೆ. ಅಲ್ಲಿಗೆ 285 ಮಂದಿ ಈಗ ಸೋಂಕಿನಿಂದ ಬಳಲುತ್ತಿರುವುದು ಕಂಡು ಬಂದಿದೆ. ಇವತ್ತು ಬೆಳಗ್ಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾರ್ನಿಂಗ್ ಬುಲೆಟಿನ್ನಲ್ಲಿ ಈ ಅಂಶ ತಿಳಿದುಬಂದಿದೆ.
ಇವತ್ತು ಬೆಳಕಿಗೆ ಬಂದ 16 ಪ್ರಕರಣಗಳಲ್ಲಿ ಬೆಂಗಳೂರಿನದ್ದು 9 ಇವೆ. ವಿಜಯಪುರ 2, ಹುಬ್ಬಳ್ಳಿ-ಧಾರವಾಡ 2, ಮಂಡ್ಯ 2, ದಕ್ಷಿಣ ಕನ್ನಡ 1 ಪ್ರಕರಣ ದಾಖಲಾಗಿವೆ.
ಇದನ್ನೂ ಓದಿ: ವಿನಾಯಿತಿ ನೀಡಿರುವ ಯಾರೇ ಬಂದರೂ ಪಾಸ್ ಕೊಡುತ್ತೇವೆ; ಪೊಲೀಸ್ ಕಮೀಷನರ್ ಭಾಸ್ಕರ್ ರಾವ್
ಕೊರೋನಾ ಸೋಂಕಿನ ಜಿಲ್ಲಾವಾರು ಪಟ್ಟಿ:ಒಟ್ಟು ಪ್ರಕರಣ: 443
ಬೆಂಗಳೂರು ನಗರ: 100
ಮೈಸೂರು: 88
ಬೆಳಗಾವಿ: 43
ವಿಜಯಪುರ: 37
ಕಲಬುರ್ಗಿ: 35
ಬಾಗಲಕೋಟೆ: 21
ಚಿಕ್ಕಬಳ್ಳಾಪುರ: 16
ದಕ್ಷಿಣ ಕನ್ನಡ: 16
ಬೀದರ್: 15
ಮಂಡ್ಯ: 14
ಬಳ್ಳಾರಿ: 13
ಬೆಂಗಳೂರು ಗ್ರಾಮಾಂತರ: 12
ಉತ್ತರ ಕನ್ನಡ: 11
ಧಾರವಾಡ: 9
ಗದಗ್: 4
ಉಡುಪಿ: 3
ದಾವಣಗೆರೆ: 2
ತುಮಕೂರು: 2
ಚಿತ್ರದುರ್ಗ: 1
ಕೊಡಗು: 1