EBM News Kannada
Leading News Portal in Kannada

ಕೊರೋನಾ ಎಫೆಕ್ಟ್: ನೌಕರರ ಡಿಎ ಮತ್ತು ಪಿಂಚಣಿದಾರರ ಡಿಆರ್ ತಡೆಹಿಡಿದ ಕೇಂದ್ರ

0

ನವದೆಹಲಿ(ಏ. 23): ಕೊರೋನಾ ಮಹಾಮಾರಿ ಮತ್ತು ಅದನ್ನು ತಡೆಯಲು ಜಾರಿಗೊಳಿಸಲಾದ ಲಾಕ್​ಡೌನ್​ಗಳಿಂದಾಗಿ‌ ದೇಶದ ಆರ್ಥಿಕತೆ ಪ್ರಪಾತ ತಲುಪಿದೆ. ಸಂಪನ್ಮೂಲ ಕ್ರೋಡೀಕರಣ ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ಈಗ ಕೇಂದ್ರ ಸರ್ಕಾರದ ನೌಕರರ ಡಿಎ ಮತ್ತು ಪಿಂಚಣಿದಾರರ ಡಿಆರ್ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ.

ಕೊರೋನಾ ಸಂಕಷ್ಟದ ಪರಿಸ್ಥಿತಿ ನಿಭಾಯಿಸುವುದಕ್ಕಾಗಿ ಈಗಾಗಲೇ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ಪ್ರಧಾನಿ ತಮ್ಮ ಎರಡು ವರ್ಷದ ಸಂಬಳವನ್ನು ನೀಡಿದ್ದಾರೆ. ಇದಲ್ಲದೆ ಕೇಂದ್ರದ ಎಲ್ಲಾ ಸಚಿವರೂ ಮತ್ತು ಸಂಸದರ ವೇತನದಲ್ಲೂ ಶೇಕಡ 30ರಷ್ಟನ್ನು ಕಡಿತ ಮಾಡಲಾಗಿದೆ. ಇದರ ಮುಂದುವರೆದ ಭಾಗವಾಗಿ‌ ಕೇಂದ್ರ ಸರ್ಕಾರದ ನೌಕರರ ಡಿಎ ಮತ್ತು ಪಿಂಚಣಿದಾರರ ಡಿಆರ್ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನೂ ಕೇಂದ್ರ ಸರ್ಕಾರ ತಡೆಹಿಡಿದಿದೆ.

2020ರ ಜನವರಿಯಿಂದ ಡಿಎ ಮತ್ತು ಡಿಆರ್ ಹೆಚ್ಚಳ ಮಾಡಬೇಕಾಗಿತ್ತು. ಕಳೆದ ಮಾರ್ಚ್​ನಲ್ಲಿ ವಿಷಯ ಪ್ರಸ್ತಾಪಿಸಿದ್ದ ಕೇಂದ್ರ ಸರ್ಕಾರ ಶೇಕಡ 4 ರಷ್ಟು ಹೆಚ್ಚಿಗೆ ಮಾಡಲು ನಿರ್ಧರಿಸಿತ್ತು. ಈ ನಿರ್ಧಾರಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆಯನ್ನೂ ನೀಡಿತ್ತು. ಆದರೀಗ ಕೊರೋನಾ ಬಿಕ್ಕಟ್ಟು ಸೃಷ್ಟಿ ಆಗಿರುವುದರಿಂದ ಡಿಎ/ಡಿಆರ್ ಹೆಚ್ಚಳಕ್ಕೆ ತಡೆ ಹಿಡಿಯಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಪರೀಕ್ಷೆ ಹೊರತು ಪರ್ಯಾಯ ಮಾರ್ಗವಿಲ್ಲ, ಮೇ3ರ ನಂತರ ಪರಿಸ್ಥಿತಿ ವಿನಾಶಕಾರಿಯಾಗಲಿದೆ; ಮನಮೋಹನ್ ಸಿಂಗ್ ಎಚ್ಚರಿಕೆ

ಇಂದು ಟ್ವೀಟ್ ಮಾಡಿರುವ ಕೇಂದ್ರ ಹಣಕಾಸು ಇಲಾಖೆ 2020ರ ಜನವರಿಯಿಂದ 2021ರ ಜನವರಿವರೆಗೆ ಕೊಡಬೇಕಿರುವ ಹೆಚ್ಚುವರಿ ಹಣವನ್ನು ಕೊಡಲು ಸಾಧ್ಯವಿಲ್ಲ. ಈಗಿರುವಷ್ಟೇ ಪ್ರಮಾಣದಲ್ಲಿ ಮಾತ್ರ ಡಿಎ ಮತ್ತು ಡಿಆರ್ ನೀಡಲಾಗುವುದು ಎಂದು ತಿಳಿಸಿದೆ.

ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ 49.26 ಲಕ್ಷ ಕೇಂದ್ರ ಸರ್ಕಾರದ ನೌಕರರಿಗೆ ಮತ್ತು 61.17‌ ಲಕ್ಷ ಪಿಂಚಣಿದಾರರಿಗೆ ಅನ್ವಯವಾಗಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 27,000 ಕೋಟಿ ರೂಪಾಯಿ ಉಳಿತಾಯ ಆಗಲಿದೆ.

Leave A Reply

Your email address will not be published.