EBM News Kannada
Leading News Portal in Kannada

ಸಿಮೆಂಟ್‌ ಲಾರಿ ಉರುಳಿ ಉದ್ಯೋಗಿ ಸಾವು

0

ಬೆಂಗಳೂರು: ಚಲಿಸುತ್ತಿದ್ದ ಸಿಮೆಂಟ್‌ ಲಾರಿಯೊಂದು ನಿಯಂತ್ರಣ ಕಳೆದುಕೊಂಡು ಕಾರಿನ ಮೇಲೆ ಅಪ್ಪಳಿಸಿ ಬಿದ್ದ ಪರಿಣಾಮ ಅಮೆಜಾನ್‌ ಕಂಪನಿ ಉದ್ಯೋಗಿಯೊಬ್ಬರು ಮೃತಪಟ್ಟ ಘಟನೆ ಬಾಣಸವಾಡಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬುಧವಾರ ಬೆಳಗಿನ ಜಾವ ಅಪಘಾತ ಸಂಭವಿಸಿದ್ದು ಮೃತಪಟ್ಟವರನ್ನು ಅಮೆಜಾನ್‌ ಕಂಪನಿಯ ಕಾರಿನ ಚಾಲಕ ಪ್ರತಾಪ್‌ ಎಂದು ಗುರುತಿಸಲಾಗಿದೆ. ಲೊಟ್ಟೆಗಾನಹಳ್ಳಿಯ ನಿವಾಸಿಯಾದ ಇವರು ಮಂಗಳವಾರ ರಾತ್ರಿ ಪಾಳಿ ಕೆಲಸ ಮುಗಿಸಿ ಬುಧವಾರ ನಸುಕಿನ 2 ಗಂಟೆ ಸುಮಾರಿಗೆ ತಮ್ಮದೇ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ನಾಗವಾರ ಸಮೀಪ ಸಿಮೆಂಟ್‌ ಲಾರಿಯ ಹಿಂದೆ ಪ್ರತಾಪ್‌ ಅವರ ಕಾರು ಇತ್ತು. ಒಂದು ಹಂತದಲ್ಲಿ ಕಾರು, ಲಾರಿಯ ಪಕ್ಕ ಬರುವ ವೇಳೆಗೆ ಸರಿಯಾಗಿ ಲಾರಿ ನಿಯಂತ್ರಣ ಕಳೆದುಕೊಂಡು ಕಾರಿನ ಮೇಲೆ ಉರುಳಿ ಬಿದ್ದಿತ್ತು. ಇದರಿಂದ ಕಾರು ಅಪ್ಪಚ್ಚಿಯಾಗಿ ಒಳಗಿದ್ದ ಪ್ರತಾಪ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಲಾರಿಯಲ್ಲಿ ಸಿಮೆಂಟ್‌ ಮತ್ತು ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ಸಾಗಿಸಲಾಗುತ್ತಿತ್ತು. ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ರಸ್ತೆ ವಿಭಜಕಕ್ಕೆ ತಾಗಿದ ಲಾರಿ ನಂತರ ಕಾರಿನ ಮೇಲೆ ಬಿದ್ದಿತ್ತು. ನಿರ್ಮಾಣ ಸಾಮಾಗ್ರಿಗಳೂ ಕಾರಿನ ಮೇಲೆ ಬಿದ್ದಿದ್ದು ಅನಾಹುತ ಹೆಚ್ಚಾಗಲು ಕಾರಣ ಎನ್ನಲಾಗಿದ್ದು ಬಾಣಸವಾಡಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಾರಿ ಚಾಲಕನನ್ನು ಬಂಧಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಲಾರಿ ಮಾಲೀಕರಿಗೆ ನೋಟಿಸ್‌ ನೀಡಿದ್ದಾರೆ.

ಸೀಟ್‌ ಬೆಲ್ಟ್‌ ತೆಗೆಯುವಷ್ಟರಲ್ಲಿ ದುರಂತ

ಪ್ರತಾಪ್‌ ಸೀಟ್‌ ಬೆಲ್ಟ್‌ ಹಾಕಿಕೊಂಡು ಕಾರು ಚಲಾಯಿಸುತ್ತಿದ್ದರು. ಎದುರಿನ ಸಿಮೆಂಟ್‌ ತುಂಬಿದ್ದ ಲಾರಿ ಆಯ ತಪ್ಪುತ್ತಿರುವುದು, ನಿಯಂತ್ರಣ ಕಳೆದುಕೊಳ್ಳುವುದನ್ನು ಗಮನಿಸಿದ್ದ ಪ್ರತಾಪ್‌ ಕಾರನ್ನು ನಿಲ್ಲಿಸಿ ಸೀಟ್‌ ಬೆಲ್ಟ್‌ ತೆಗೆಯುವ ಪ್ರಯತ್ನದಲ್ಲಿದ್ದರು. ಅಷ್ಟರಲ್ಲಿ ಲಾರಿ ಉರುಳಿತ್ತು. ಸೀಟ್‌ ಬೆಲ್ಟ್‌ ಹಾಕಿಕೊಳ್ಳದೇ ಇದ್ದಿದ್ದರೆ ಅವರು ಬಚಾವಾಗುವ ಸಾಧ್ಯತೆಗಳಿತ್ತು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.

Leave A Reply

Your email address will not be published.