EBM News Kannada
Leading News Portal in Kannada

ಕಾರಿನ ಗಾಜು ಒಡೆದ ದುಷ್ಕರ್ಮಿಗಳ ಕಾಲಿಗೆ ಗುಂಡು

0

ಬೆಂಗಳೂರು: ಮನೆ ಮುಂದೆ ನಿಂತಿದ್ದ ಕಾರಿನ ಗಾಜುಗಳನ್ನು ಪುಡಿಗೈದು ವಾಹನಗಳನ್ನು ಜಖಂಗೊಳಿಸಿದ್ದ ಇಬ್ಬರು ದುಷ್ಕರ್ಮಿಗಳ ಕಾಲಿಗೆ ಗುಂಡೇಟು ಹೊಡೆದು ಬಂಧಿಸುವಲ್ಲಿ ಉತ್ತರ ಡಿಸಿಪಿ ವಿಭಾಗದ ಪೊಲೀಸರು ಯಶಸ್ವಿ ಆಗಿದ್ದಾರೆ.

ಜೂ.16 ರಂದು ಮಹಾಲಕ್ಷ್ಮಿಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ಮನೆ ಮುಂದೆ ನಿಂತಿದ್ದ 20 ಕ್ಕೂ ಹೆಚ್ಚು ವಾಹನಗಳನ್ನು ಈ ಕಿಡಿಗೇಡಿಗಳು ಜಖಂಗೊಳಿಸಿದ್ದರು. ಆನಂತರ ಘಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದ ಉತ್ತರ ವಿಭಾಗದ ಡಿಸಿಪಿ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಈ ತಂಡ ಆರೋಪಿಗಳನ್ನು ಬೆನ್ನತ್ತಿದಾಗ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿ ಆಗಲು ಯತ್ನಿಸಿದ ಕಮಲನಗರದ ನಿವಾಸಿ ರಫೀಕ್‌ ಮತ್ತು ಪ್ರಕಾಶ್‌ನಗರದ ಆರೋಪಿ ಸುಧಾಕರ್‌ ಕಾಲಿಗೆ ಗುಂಡು ಹೊಡೆದು ಬಂಧಿಸಿದೆ.

ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆ, ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ಕೃತ್ಯಗಳಲ್ಲಿ ನಗರದ ನಾನಾ ಠಾಣೆಗಳಿಗೆ ಬೇಕಾಗಿದ್ದ ಈ ಆರೋಪಿಗಳು, ಕುಡಿದ ಅಮಲಿನಲ್ಲಿ ಮತ್ತು ಗಾಂಜಾ ಕಿಕ್‌ನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಜಖಂಗೊಳಿಸುವುದು, ಕಾರುಗಳ ಗಾಜುಗಳನ್ನು ಪುಡಿಗೈಯುವುದನ್ನು ರೂಢಿಸಿಕೊಂಡಿದ್ದರು. ಜೂ.16ರ ರಾತ್ರಿ ಮಹಾಲಕ್ಷ್ಮಿ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ಮತ್ತು ಜೆ.ಸಿ.ನಗರದಲ್ಲಿ ಮನೆ ಮುಂದೆ ನಿಂತಿದ್ದ 20 ಕ್ಕೂ ಹೆಚ್ಚು ಕಾರು, ಆಟೋ ಸೇರಿ ನಾನಾ ವಾಹನಗಳನ್ನು ಜಖಂಗೊಳಿಸಿದ್ದರು. ಘಟನೆ ನಂತರ ಮಹಾಲಕ್ಷ್ಮಿ ಲೇಔಟ್‌ ಠಾಣೆ ಇನ್ಸ್‌ಪೆಕ್ಟರ್‌ ಬಿ.ಎನ್‌.ಲೋಹಿತ್‌, ಸುಬ್ರಮಣ್ಯನಗರ ಠಾಣೆ ಇನ್ಸ್‌ಪೆಕ್ಟರ್‌ ಮಹೇಂದ್ರ ಕುಮಾರ್‌, ಜಾಲಹಳ್ಳಿ ಇನ್ಸ್‌ಪೆಕ್ಟರ್‌ ನಿರಂಜನ್‌ಕುಮಾರ್‌ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ಜೂ.19 ರಂದು ಗಸ್ತಿನಲ್ಲಿದ್ದ ತನಿಖಾ ತಂಡಕ್ಕೆ ಮಾರುತಿ ಜೆನ್‌ ಕೆ.ಎ-51, ಎಂ.ಇ. 9722 ನಂಬರಿನ ಕಾರಿನಲ್ಲಿ ಆರೋಪಿಗಳು ದರೋಡೆಗೆ ಸ್ಕೆಚ್‌ ಹಾಕಿಕೊಂಡು ಕುಳಿತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಬೆನ್ನತ್ತಿದಾಗ ಆರೋಪಿಗಳು ರಾಜರಾಜೇಶ್ವರಿನಗರ ಸಮೀಪದ ಕರೀಂಸಾಬ್‌ ಲೇಔಟ್‌ ಕಡೆಗೆ ಪರಾರಿ ಆಗುತ್ತಿದ್ದರು. ನಾಲ್ಕೂ ದಿಕ್ಕಿನಿಂದ ಪೊಲೀಸರು ಆರೋಪಿಗಳನ್ನು ಸುತ್ತುವರಿದು ಶರಣಾಗುವಂತೆ ಸೂಚಿಸಿದರೂ ಆರೋಪಿಗಳು ತಪ್ಪಿಸಿಕೊಳ್ಳುವ ಯತ್ನಿಸಿದ್ದರಲ್ಲದೆ ಮುಖ್ಯಪೇದೆಗೆ ಚಾಕುವಿನಿಂದ ಇರಿದಿದ್ದರು. ತಕ್ಷಣ ಎಚ್ಚೆತ್ತ ಇನ್ಸ್‌ಪೆಕ್ಟರ್‌ ಲೋಹಿತ್‌ ಸವೀರ್‍ಸ್‌ ರಿವಾಲ್ವರ್‌ನಿಂದ ಹಾರಿಸಿದ ಗುಂಡು ರಫೀಕ್‌ನ ಬಲಗಾಲಿಗೆ, ಸುಧಾಕರ್‌ನ ಎಡಗಾಲಿಗೆ ಹೊಕ್ಕಿದೆ. ಇಬ್ಬರೂ ಆರೋಪಿಗಳು ಕೈಯಲ್ಲಿ ಹಿಡಿದಿದ್ದ ಡ್ಯಾಗರನ್ನು ಕೆಳಕ್ಕೆ ಹಾಕಿ ಸ್ಥಳದಲ್ಲೇ ಕುಸಿದು ಕುಳಿತರು. ನಂತರ ಇಬ್ಬರನ್ನೂ ಬಂಧಿಸಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿದ್ದು ವೈದ್ಯರು ಆರೋಪಿಗಳ ಕಾಲು ಹೊಕ್ಕಿದ್ದ ಗುಂಡನ್ನು ಹೊರಗೆ ತೆಗೆದು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.

ಆರೋಪಿಗಳ ದಾಳಿಯಿಂದ ಗಾಯಗೊಂಡಿದ್ದ ಮುಖ್ಯಪೇದೆ ಹನುಮಂತರಾಜು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಈ ತಂಡಕ್ಕೆ ಹಿರಿಯ ಅಧಿಕಾರಿಗಳು ನಗದು ಬಹುಮಾನ ಘೋಷಿಸಿದ್ದಾರೆ.

ಕೆ.ಟಿ.ಎಂ. ಡ್ಯೂಕ್‌ ದರೋಡೆ

ಗುಂಡೇಟು ತಿಂದು ಬಂಧಿತರಾದ ಆರೋಪಿಗಳು ಜೂ.17ರ ರಾತ್ರಿ ರಾಜಾಜಿನಗರದಲ್ಲಿ ಖಾಸಗಿ ಕಂಪನಿ ಉದ್ಯೋಗಿ ಒಬ್ಬರನ್ನು ಬೆದರಿಸಿ ಅವರ ಬಳಿ ಇದ್ದ ಕೆ.ಟಿ.ಎಂ ಡ್ಯೂಕ್‌ ಬೈಕ್‌ ಕಿತ್ತುಕೊಂಡು ಪರಾರಿ ಆಗಿದ್ದರು.

ರಫೀಕ್‌ ಡೈರಿ

ಬಸವೇಶ್ವರ ನಗರ ಠಾಣೆಯಲ್ಲಿ 3 ಕೊಲೆ, 2 ದರೋಡೆ, ಒಂದು ಹಲ್ಲೆ ಕೇಸು ದಾಖಲಾಗಿದೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದರೋಡೆ, ತಾವರೆಕೆರೆ ಠಾಣೆಯಲ್ಲಿ ಒಂದು ಕೊಲೆ, ತಮಿಳುನಾಡಿನಲ್ಲಿ ಹಣಕ್ಕಾಗಿ ಅಪಹರಣ ಮಾಡಿದ್ದು, ರಾಜಾಜಿನಗರ ಠಾಣೆಯಲ್ಲಿ ಸುಲಿಗೆ ಪ್ರಕರಣ, ಮಹಾಲಕ್ಷ್ಮಿ ಲೇಔಟ್‌ ಠಾಣೆಯಲ್ಲಿ ಸಾರ್ವಜನಿಕರ ವಾಹನಗಳನ್ನು ಹಾಳುಗೆಡವಿದ 8 ಪ್ರಕರಣಗಳು ಸೇರಿ ಒಟ್ಟು ಒಂದೂವರೆ ಡಜನ್‌ ಕೇಸುಗಳು ಈತನ ಮೇಲಿವೆ.

ಸುಧಾಕರನ ಡೈರಿ

ಮಹಾಲಕ್ಷ್ಮಿ ಲೇಔಟ್‌ ಠಾಣೆಯಲ್ಲಿ ಕೊಲೆಯತ್ನ, ಸಾರ್ವಜನಿಕ ವಾಹನಗಳಿಗೆ ಹಾನಿಯನ್ನುಂಟು ಮಾಡಿದ 8 ಕೇಸುಗಳಿವೆ. ಪೀಣ್ಯ ಠಾಣೆಯಲ್ಲಿ ದರೋಡೆ, ಜಯನಗರ ಠಾಣೆಯಲ್ಲಿ ಸುಲಿಗೆ, ಚಂದ್ರಾಲೇಔಟ್‌ ಠಾಣೆಯಲ್ಲಿ ಕಳ್ಳತನ, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಕಳ್ಳತನ, ಶ್ರೀರಾಮಪುರ ಠಾಣೆಯಲ್ಲಿ ಕೊಲೆ, ರಾಜಾಜಿನಗರ ಠಾಣೆಯಲ್ಲಿ ಸುಲಿಗೆ, ಆಂಧ್ರಪದೇಶ ಮತ್ತು ತಮಿಳುನಾಡಿನಲ್ಲಿ ಹಣಕ್ಕಾಗಿ ಅಪಹರಣ ಮಾಡಿದ ಪ್ರಕರಣಗಳೂ ಸೇರಿ ಈತನ ಮೇಲೂ ಒಂದೂವರೆ ಡಜನ್‌ ಕೇಸುಗಳಿವೆ.

Leave A Reply

Your email address will not be published.