EBM News Kannada
Leading News Portal in Kannada

ಯೋಗ ದಿನಾಚರಣೆ: ಸುರಿನಾಮ್‌ನಲ್ಲಿ ಕೋವಿಂದ್‌, ಯುರೋಪಿಯನ್‌ ಸಂಸತ್ತಿನಲ್ಲಿ ಸುಷ್ಮಾ

0

ಹೊಸದಿಲ್ಲಿ: ಅರಬ್‌ ದೇಶಗಳಾದ ಯುಎಇ ಮತ್ತು ಬಹರೇನ್‌, ಅಮೆರಿಕ, ಕೆನಡಾ, ಫ್ರಾನ್ಸ್‌, ಬ್ರಿಟನ್‌, ಬ್ರಸೆಲ್ಸ್‌, ಚೀನಾ, ಮಲೇಷ್ಯಾ, ಇಂಡೋನೇಷ್ಯಾ, ಸಿಂಗಾಪುರ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಹೀಗೆ ವಿಶ್ವಾದ್ಯಂತ 150ಕ್ಕೂ ಹೆಚ್ಚು ದೇಶಗಳಲ್ಲಿ ಯೋಗ ಆಚರಣೆ ನಡೆಯಿತು. ಅಲ್ಲಿನ ಭಾರತೀಯ ಧೂತಾವಾಸ ಕಚೇರಿಗಳು ಪ್ರಮುಖ ಸ್ಥಳಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ನೂರಾರು ಜನರು ಪಾಲ್ಗೊಂಡರು. ತ್ರಿರಾಷ್ಟ್ರ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಸುರಿನಾಮ್‌ನ ರಾಜಧಾನಿ ಪಾರಾಮಾರಿಬೊದಲ್ಲಿನ ಕಾರ್ಯಕ್ರಮದಲ್ಲಿ ಭಾಗಿಯಾದರು. ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರು ಯುರೋಪಿಯನ್‌ ಸಂಸತ್ತಿನಲ್ಲಿ ನಡೆದ ಯೋಗ ಸೆಷನ್ಸ್‌ನಲ್ಲಿ ಪಾಲ್ಗೊಂಡಿದ್ದರು.

ವಿಶ್ವಸಂಸ್ಥೆಯಲ್ಲಿ ಆಚರಣೆ

ವಿಶ್ವಸಂಸ್ಥೆಯಲ್ಲಿ ಬುಧವಾರವೇ ಆಚರಿಸಲಾದ ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ವಿಶ್ವಸಂಸ್ಥೆಯ ರಾಯಭಾರಿಗಳು, ರಾಜತಾಂತ್ರಿಕರು, ಧಾರ್ಮಿಕ ಗುರುಗಳು ಹಾಗೂ ಮಕ್ಕಳು ಪಾಲ್ಗೊಂಡಿದ್ದರು. ಯೋಗಪಟು ನಿಶಾ ಪುಷ್ಪವನಂ ಅವರು ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ಅವರ ವಿಡಿಯೊ ಸಂದೇಶವನ್ನು ಪ್ರಸಾರ ಮಾಡಲಾಯಿತು. ದೈಹಿಕ ಹಾಗೂ ಮಾನಸಿಕ ನೆಮ್ಮದಿ ತರುವ ಯೋಗಕ್ಕೆ ವಿಶ್ವಶಾಂತಿ ಸಾಕಾರದ ಶಕ್ತಿ ಇದೆ ಎಂದು ವಿಶ್ವಸಂಸ್ಥೆ ಉಪ ಮಹಾ ಕಾರ‍್ಯದರ್ಶಿ ಅಮಿನಾ ಮೊಹಮ್ಮದ್‌ ಹೇಳಿದರು. ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಸೈಯ್ಯದ್‌ ಅಕ್ಬರುದ್ದೀನ್‌ ಯೋಗದ ಗುಣಗಾನ ಮಾಡಿದರು.

ವಿಶ್ವದಾಖಲೆ ಬರೆದ ರಾಜಸ್ಥಾನ

ಯೋಗ ಗುರು ಬಾಬಾ ರಾಮ್‌ದೇವ್‌ ನೇತೃತ್ವದಲ್ಲಿ ರಾಜಸ್ಥಾನದ ಕೋಟಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಯೋಗ ಮಾಡುವ ಮೂಲಕ ಮೈಸೂರಿನಲ್ಲಿ ಕಳೆದ ವರ್ಷ ದಾಖಲಾಗಿದ್ದ ವಿಶ್ವದಾಖಲೆಯನ್ನು ಅಳಿಸಿಹಾಕಿದ್ದಾರೆ. 2017ರಲ್ಲಿ ಮೈಸೂರಿನಲ್ಲಿ ನಡೆದಿದ್ದ ಕಾರ‍್ಯಕ್ರಮದಲ್ಲಿ 55,524 ಜನರು ಯೋಗಾಸನಗಳನ್ನು ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಲಾಗಿತ್ತು. ಆದರೆ ಗುರುವಾರ ಕೋಟಾದ ಆರ್‌ಎಸಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ 1.05 ಲಕ್ಷ ಜನರು ಯೋಗಾಸನ ಮಾಡಿದ್ದು ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್ಸ್ ಸಂಸ್ಥೆಯ ಪ್ರತಿನಿಧಿಗಳು ಇದನ್ನು ರೆಕಾರ್ಡ್‌ ಮಾಡಿಕೊಂಡು ವಿಶ್ವದಾಖಲೆ ಎಂದು ಮಾನ್ಯತೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. 15 ಆಸನಗಳನ್ನು ಇಲ್ಲಿ ಪ್ರದರ್ಶಿಸಲಾಗಿತ್ತು. ಮುಖ್ಯಮಂತ್ರಿ ವಸುಂಧರಾ ರಾಜೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಯೋಗಾಯೋಗ

– ಬಿಹಾರದಲ್ಲಿ ಯೋಗ ಕಾರ‍್ಯಕ್ರಮದಿಂದ ದೂರ ಉಳಿದ ಸಿಎಂ ನಿತೀಶ್‌ ಕುಮಾರ್‌.

– ಹರಿಯಾಣದಲ್ಲಿ ಯೋಗ ಆಯೋಗ ರಚನೆ ಘೋಷಿಸಿದ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌.

– ಸದೃಢ ಆರೋಗ್ಯದಾಯಕ ಭಾರತ ನಿರ್ಮಾಣಕ್ಕೆ ಶಾಲಾ ಪಠ್ಯದಲ್ಲಿ ಯೋಗ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಗ್ರಹ

– ಭೂಸೇನೆ, ವಾಯುಪಡೆ, ನೌಕಾಪಡೆ, ಬಿಎಸ್‌ಎಫ್‌, ಸಿಆರ್‌ಪಿಎಫ್‌, ಸಿಐಎಸ್‌ಎಫ್‌ ನ 50,000 ಸಿಬ್ಬಂದಿಯಿಂದ ಹಲವೆಡೆ ಯೋಗ

ಯೋಗವನ್ನು ಕೆಲವು ಧರ್ಮಗಳು ಹಾಗೂ ಸಂಘಟನೆಗಳು ಹೈಜಾಕ್‌ ಮಾಡಲು ಹೊರಟಿವೆ. ಇದು ವಿಶ್ವಮಾನ್ಯ. ಯಾವುದೇ ಧರ್ಮಕ್ಕೆ ಸೀಮಿತವಾಗಬಾರದು.

Leave A Reply

Your email address will not be published.