ಗೌರಿ ಹತ್ಯೆ : ನವೀನ್ ಜಾಮೀನು ಅರ್ಜಿ ವಿಚಾರಣೆ 26ಕ್ಕೆ
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಹೊಟ್ಟೆ ನವೀನ್ ಜಾಮೀನು ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿದ್ದು ವಕೀಲ ವೇದಮೂರ್ತಿ ಅವರ ಸುಧೀರ್ಘ 45 ನಿಮಿಷಗಳ ವಾದದ ನಂತರ ವಿಚಾರಣೆಯನ್ನು ಜೂ.26 ಕ್ಕೆ ಮುಂದೂಡಲಾಯಿತು.
ಬಹಳ ಗಂಭೀರವಾದ ಈ ಪ್ರಕರಣದಲ್ಲಿ ಆರೋಪಿ ನವೀನ್ಗೆ ಜಾಮೀನು ನೀಡಿದರೆ, ಇನ್ನೂ ಬಂಧಿತರಾಗಬೇಕಾದ ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿಸಿದ ಎಸ್ಐಟಿ ಪರ ವಕೀಲರು ನವೀನ್ ಜಾಮೀನು ಅರ್ಜಿಗೆ ತಕರಾರು ಸಲ್ಲಿಸಿದರು.
ನವೀನ್ ಪರ ವಕೀಲ ವೇದಮೂರ್ತಿ ವಾದ ಮಂಡಿಸಿ,”ಮೂರು ಮಂದಿ ಸಾಕ್ಷಿ ಹೇಳಿಕೆಗಳ ಆಧಾರದ ಮೇಲೆ ಎಸ್ಐಟಿ ಅಧಿಕಾರಿಗಳು ನವೀನ್ಕುಮಾರ್ನನ್ನು ಆರೋಪಿಯನ್ನಾಗಿಸಿದ್ದಾರೆ. ಈಗಾಗಲೇ ಆರೋಪ ಪಟ್ಟಿಯನ್ನೂ ಸಲ್ಲಿಸಿರುವ ಎಸ್ಐಟಿ ನವೀನ್ಕುಮಾರ್ ಮಾಡಿದ ಅಪರಾಧ ಏನು ? ಎನ್ನುವುದನ್ನೂ ತಿಳಿಸಿಲ್ಲ. ಬುಲೆಟ್ಗಳನ್ನು ಮಾರಾಟ ಮಾಡಲು ಬಂದಿದ್ದಾಗಿ ಒಂದು ಕಡೆ ತಿಳಿಸಿದರೆ, ಮತ್ತೊಂದು ಕಡೆ ಬುಲೆಟ್ ಖರೀಧಿಸಲು ಓಡಾಡಿದ್ದ ಎಂದು ಹೇಳುತ್ತಾರೆ. ಹೀಗಾಗಿ ತನಿಖಾಧಿಕಾರಿಗಳಿಗೇ ಈ ಬಗ್ಗೆ ಇನ್ನೂ ಖಚಿತತೆ ಇಲ್ಲ. ಪ್ರೊ.ಭಗವಾನ್ ಕೊಲೆ ಸಂಚಿನಲ್ಲಿ ಮೊದಲು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಲಯ ನವೀನ್ಗೆ ಜಾಮೀನು ಮಂಜೂರು ಮಾಡಿದೆ. ಹೀಗಾಗಿ ಯಾವ ಖಚಿತ ಆರೋಪಗಳೂ ಇಲ್ಲದ ಗೌರಿ ಹತ್ಯೆ ಪ್ರಕರಣದಲ್ಲೂ ಜಾಮೀನು ನೀಡಬೇಕು’ ಎಂದು ಮನವಿ ಮಾಡಿದರು. ಮುಕ್ಕಾಲು ಗಂಟೆ ವಾದದ ನಂತರ ನ್ಯಾಯಾಲಯದ ಅವಧಿ ಮುಗಿದಿದ್ದರಿಂದ ವಿಚಾರಣೆಯನ್ನು ಜೂ.26 ಕ್ಕೆ ಮುಂದೂಡಲಾಯಿತು.