EBM News Kannada
Leading News Portal in Kannada

ರಾಷ್ಟ್ರಪತಿ ಆಡಳಿತ ಹೇರಿದ ಬೆನ್ನಲ್ಲೇ, ಉಗ್ರರ ದಮನಕ್ಕೆ ಕಾಶ್ಮೀರಕ್ಕೆ ಎನ್ಎಸ್ ಜಿ, ಸ್ನೈಪರ್ ಪಡೆ ರವಾನೆ!

0

ನವದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಹಾವಳಿ ಮಿತಿ ಮೀರಿರುವಂತೆಯೇ ಇತ್ತ ಕೇಂದ್ರ ಸರ್ಕಾರ ಕಣಿವೆ ರಾಜ್ಯಕ್ಕೆ ಎನ್ ಎಸ್ ಜಿ ಮತ್ತು ಸ್ನೈಪರ್ ಪಡೆಗಳನ್ನು ರವಾನೆ ಮಾಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮೇರೆ ಮೀರಿರುವ ಉಗ್ರರನ್ನು ಮಟ್ಟ ಹಾಕಲು ವೇದಿಕೆ ಸಿದ್ಧವಾಗಿದ್ದು, ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಎನ್ ಎಸ್ ಜಿ ಕಮಾಂಡೋ ಪಡೆ, ಸ್ನೈುಪರ್ ಪಡೆಗಳನ್ನು ರವಾನೆ ಮಾಡಿದ್ದು, ಇದಲ್ಲದೇ ಅತ್ಯಾಧುನಿಕ ರಾಡಾರ್ ಗಳನ್ನು ರವಾನೆ ಮಾಡಿದೆ ಎಂದು ತಿಳಿದುಬಂದಿದೆ.

ಶ್ರೀನಗರದಲ್ಲಿರುವ ಗಡಿ ಭದ್ರತಾ ಪಡೆ (ಬಿ.ಎಸ್‌.ಎಫ್.) ಕ್ಯಾಂಪ್‌ ಕಚೇರಿ ಹುಮಾಹಾದಲ್ಲಿ ಎನ್‌ಎಸ್‌ಜಿ ಕಮಾಂಡೋ ಪಡೆಗೆ ಬಿರುಸಿನಿಂದ ತರಬೇತಿ ನೀಡಲಾಗುತ್ತಿದೆ. ಕೇಂದ್ರ ಗೃಹ ಖಾತೆ ಮೂಲಗಳ ಪ್ರಕಾರ 2 ವಾರಗಳ ಹಿಂದೆಯೇ ಎನ್‌ಎಸ್‌ಜಿಯ ಹೌಸ್‌ ಇಂಟರ್‌ವೆನ್ಶನ್‌ ಟೀಮ್‌ (ಎಚ್‌.ಐ.ಟಿ.) ಕೂಡ ಕಣಿವೆ ರಾಜ್ಯಕ್ಕೆ ತೆರಳಿದೆ. ಇದರ ಜತೆಗೆ ಶೀಘ್ರದಲ್ಲಿಯೇ ಎನ್‌ಎಸ್‌ಜಿಯ 100 ಸದಸ್ಯರು ಕಣಿವೆ ರಾಜ್ಯಕ್ಕೆ ತೆರಳಲಿದ್ದಾರೆ. ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ವಿವಿಧ ಭದ್ರತಾ ಪಡೆಗಳಲ್ಲಿ ಉಂಟಾಗಬಹುದಾದ ಸಾವು-ನೋವು ತಡೆಯಲು ನೆರವಾಗಲಿದೆ ಎನ್ನಲಾಗುತ್ತಿದೆ. ಎಂಪಿ 5 ಗನ್‌ಗಳು, ಸ್ನೈಪರ್‌ ರೈಫಲ್‌ಗಳು, ವಿಶೇಷ ರಾಡಾರ್‌ಗಳು ಹಾಗು ಸಿ 4 ಸ್ಫೋಟಕಗಳನ್ನು ಬಳಸುವ ಮೂಲಕ ಅವಿತುಕೊಂಡಿರುವ ಭಯೋತ್ಪಾದಕರ ಮಟ್ಟ ಹಾಕುವಲ್ಲಿಎನ್‌ಎಸ್‌ಜಿ ವಿಶೇಷತೆ ಹೊಂದಿದೆ.

ಎನ್‌.ಎಸ್‌.ಜಿ. ಕಮಾಂಡೋಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸುವ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಒಂದು ತಿಂಗಳ ಹಿಂದೆಯೇ ಅನುಮೋದನೆ ನೀಡಿತ್ತು ಎಂಬ ವಿಚಾರವೂ ಗುರುವಾರ ಬೆಳಕಿಗೆ ಬಂದಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮನೆ, ಸರಕಾರಿ ಕಟ್ಟ‚ಡಗಳಿಗೆ ನುಗ್ಗಿದಾಗ ಅವರನ್ನು ಹೊರ ಹಾಕಿ ಗುಂಡಿಟ್ಟು ಕೊಲ್ಲುವುದು ಸಿಆರ್‌ಪಿಎಫ್ ಸಹಿತ ಭದ್ರತಾ ಪಡೆಗಳಿಗೆ ದೊಡ್ಡ ಸವಾಲು. ಇಂಥಹ ಸಂದರ್ಭದಲ್ಲಿ ಸೇನಾ ಸಿಬ್ಬಂದಿಯ ಪ್ರಾಣ ನಷ್ಟವಾಗುವುದನ್ನು ತಪ್ಪಿಸಲು ಕಟ್ಟಡದೊಳಕ್ಕೆ ನುಗ್ಗುವುದನ್ನು ತಡೆಯಲಾಗುತ್ತದೆ. ಈ ರೀತಿಯ ಸನ್ನಿವೇಶಗಳಲ್ಲಿ ಎನ್‌ಎಸ್‌ಜಿ ನೆರವಿಗೆ ಬರಲಿದ್ದು, ಸೈನಿಕರ ಪ್ರಾಣಹಾನಿಇಲ್ಲದೇ ಉಗ್ರರನ್ನು ಮಟ್ಟಹಾಕುವ ಕಲೆ ಎನ್ ಎಸ್ ಜಿ ಕರಗತವಾಗಿದೆ.

ಇನ್ನು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ನೀಡಿದ ಅಂಕಿ ಅಂಶದ ಪ್ರಕಾರ, 2017ರಲ್ಲಿ ಕಟ್ಟಡದೊಳಕ್ಕೆ ಉಗ್ರರು ನುಗ್ಗಿ ಮಾಡಿದ ಅನಾಹುತಗಳಿಂದಲೇ 80 ಮಂದಿ ಭದ್ರತಾ ಸಿಬಂದಿ ಹುತಾತ್ಮರಾಗಿದ್ದರೆ, 70 ಮಂದಿ ನಾಗರಿಕರು ಜೀವ ಕಳೆದುಕೊಂಡಿದ್ದರು. ಈ ವರ್ಷದ ಮೇ ವರೆಗೆ 30 ಸೇನಾ ಸಿಬಂದಿ, 35 ನಾಗರಿಕರು ಜೀವ ಕಳೆದುಕೊಂಡಿದ್ದಾರೆ.

Leave A Reply

Your email address will not be published.