EBM News Kannada
Leading News Portal in Kannada

ಕೊರೋನಾ ವಿರುದ್ಧ ಹೋರಾಟ: ‘ಸಾಧ್ಯವಾದರೆ ಸಹಾಯ ಮಾಡಿ ಹೊರತು ರಾಜಕೀಯ ಮಾಡಬೇಡಿ‘ – ಡಿಸಿಎಂ ಗೋವಿಂದ ಕಾರಜೋಳ

ಬಾಗಲಕೋಟೆ(ಏ.12): “ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ ಕೊರೋನಾ ವೈರಸ್​​ ವಿರುದ್ಧದ ಹೋರಾಟಕ್ಕಾಗಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿಯವರೇ ಚಪ್ಪಾಳೆ ತಟ್ಟಿದ್ದರು. ಕೋವಿಡ್​​​-19 ವೈರಸ್​ನಿಂದಾಗಿ ಇಡೀ ಜಗತ್ತೇ ಅಗ್ನಿಪರ್ವತದ ಮೇಲೆ ಕುಳಿತಿದೆ. ಹೀಗಿರುವಾಗ ಈ ವಿಚಾರದಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ” ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಚಪ್ಪಾಳೆ ಮತ್ತು ದೀಪೋತ್ಸವ ಕರೆಯನ್ನು ವ್ಯಂಗ್ಯ ಮಾಡಿದ್ದ ಆರ್​​​.ಬಿ ತಿಮ್ಮಾಪುರಗೆ ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ನೀಡಿದರು.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಡಿಸಿಎಂ ಗೋವಿಂದ ಕಾರಜೋಳ, ಇಡೀ ದೇಶ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಕರೆಗೆ ರಾಹುಲ್​​ ಗಾಂಧಿಯವರೇ ಓಗೊಟ್ಟು ಚಪ್ಪಾಳೆ ತಟ್ಟಿದ್ದಾರೆ. ಸಾಧ್ಯವಾದರೆ ಕೊರೋನಾ ವಿರುದ್ಧ ಹೋರಾಡಲು ಸಹಕಾರಿಯಾಗಬೇಕೇ ಹೊರತು ರಾಜಕಾರಣ ಮಾಡಲು ಇದು ಸಕಾಲವಲ್ಲ ಎಂದರು.

ಮಾನವ ಕುಲ ಉಳಿಸೋಕೆ ಸಹಾಯ ಮಾಡಬೇಕು. ಉಳ್ಳವರು ಸಾವಿರಾರು ಕೋಟಿ ಹಣವನ್ನು ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಕೊರೋನಾದಿಂದ ದೇಶ ಮತ್ತು ಜನರನ್ನು ಪಾರು ಮಾಡಲು ವೈದ್ಯರು ಮತ್ತು ದಾದಿಯರು ಹೋರಾಡುತ್ತಿದ್ದಾರೆ. ಈಗ ನಾವು ಇವರನ್ನು ಸ್ಮರಿಸಬೇಕೇ ಹೊರತು ಈ ಸಂದರ್ಭದಲ್ಲೂ ರಾಜಕೀಯ ಮಾಡಬಾರದು ಎಂದು ಕುಟುಕಿದರು ಡಿಸಿಎಂ ಗೋವಿಂದ ಕಾರಜೋಳ.

ರಾಜ್ಯದಲ್ಲಿ ಎನ್-95 ಮಾಸ್ಕ್ ,ಪಿಪಿಇ ಪರಿಕರ, ವೆಂಟಿಲೇಟರ್ ಕೊರತೆ ಇಲ್ಲ. ಕೊರೋನಾ ಆರಂಭವಾದಗಲೇ 19 ಲಕ್ಷದ 83 ಸಾವಿರ ಎನ್-95 ಮಾಸ್ಕ್ ಆರ್ಡರ್ ಕೊಡಲಾಗಿತ್ತು. ಈಗಾಗಲೇ 6 ಲಕ್ಷ ಮಾಸ್ಕ್ ಪೂರೈಕೆ ಆಗಿವೆ. ಪಿಪಿಇ ಪರಿಕರ 10 ಲಕ್ಷದ 5 ಸಾವಿರ ಆರ್ಡರ್ ಕೊಟ್ಟಿದ್ದೇವೆ. ಇವು ಕೂಡ 2 ಲಕ್ಷ 30 ಸಾವಿರ ಪೂರೈಕೆ ಆಗಿವೆ. 1574 ವೆಂಟಿಲೇಟರ್ ಆರ್ಡರ್ ಕೊಡಲಾಗಿತ್ತು. ಈಗಾಗಲೇ ಹಂತ ಹಂತವಾಗಿ ಇದರ ಪೂರೈಕೆ ನಡೆಯುತ್ತಿದೆ ಎಂದು ಭರವಸೆ ನೀಡಿದರು.

ಇನ್ನು, ಬಾಗಲಕೋಟೆಯಲ್ಲಿ 8 ಮಂದಿಗೆ ಸೋಂಕು ಬಂದಿದೆ. ಇದರಲ್ಲಿ ಓರ್ವ ಸಾವನ್ನಪ್ಪಿದ್ದು, 7 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದಷ್ಟು ಬೇಗ ಎಲ್ಲರೂ ಗುಣಮುಖರಾಗಲಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಕೊರೋನಾ ಕಂಟ್ರೋಲ್​​ನಲ್ಲಿದೆ ಎಂದು ಹೇಳಿದರು.