ದೇಶದ ಜನರಿಗೆ 3 ತಿಂಗಳ ಮನೆ ಬಾಡಿಗೆ ಹಣ ನೀಡಿ; ಪ್ರಧಾನಿ ಮೋದಿಗೆ ಎಚ್.ಡಿ. ಕುಮಾರಸ್ವಾಮಿ ಮನವಿ
ಬೆಂಗಳೂರು (ಏ. 12): ದೇಶದೆಲ್ಲೆಡೆ ಲಾಕ್ಡೌನ್ ಘೋಷಿಸಿರುವುದರಿಂದ ಎಷ್ಟೋ ಜನರಿಗೆ ಕೆಲಸವಿಲ್ಲದೆ, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಹೀಗಾಗಿ, ದೆಹಲಿ ಸರ್ಕಾರ ತನ್ನ ರಾಜ್ಯದ ಜನರಿಗೆ 3 ತಿಂಗಳ ಮನೆ ಬಾಡಿಗೆ ಹಣವನ್ನು ಕೊಡುವ ಯೋಜನೆಯನ್ನು ರೂಪಿಸಿದೆ. ಅದೇರೀತಿ ದೇಶಾದ್ಯಂತ ಬಾಡಿಗೆ ಮನೆಯಲ್ಲಿರುವವರ 3 ತಿಂಗಳ ಬಾಡಿಗೆ ಹಣವನ್ನು ಭರಿಸುವ ಯೋಜನೆ ಜಾರಿಗೆ ತರುವಂತೆ ಕೇಂದ್ರ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಆರ್ಥಿಕ ಮುಗ್ಗಟ್ಟಿನಿಂದ ಬಾಡಿಗೆದಾರರನ್ನು ಕಾಪಾಡಲು ಅನೇಕ ದೇಶಗಳು ಲಾಕ್ಡೌನ್ ಅವಧಿಯಲ್ಲಿ ಬಾಡಿಗೆ ವಿನಾಯಿತಿ ಘೋಷಿಸಿವೆ. ದೆಹಲಿಯ ಸರ್ಕಾರ ಮೂರು ತಿಂಗಳ ಬಾಡಿಗೆಯನ್ನು ಕೊಡುವ ಯೋಜನೆ ಘೋಷಿಸಿದೆ. ಇದೇ ರೀತಿ ಇಡೀ ದೇಶಕ್ಕೆ ಅನ್ವಯವಾಗುವಂತೆ ಮೂರು ತಿಂಗಳು ಬಾಡಿಗೆ ವಿನಾಯಿತಿ ಘೋಷಿಸಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ದೆಹಲಿ ಮುಂಬಯಿ ಬೆಂಗಳೂರಿನಂತಹ ನಗರಗಳಲ್ಲಿ ವೃತ್ತಿ ಮಾಡುವ ಹಾಗೂ ಇಲ್ಲಿನ ಸಂಸ್ಥೆಗಳಲ್ಲಿ ಓದುತ್ತಿರುವ ಅನೇಕ ಜನರ ಆರ್ಥಿಕ ಸ್ಥಿತಿ ನಾಜೂಕಾಗಿದೆ. ಇಂತಹ ಸಂದರ್ಭದಲ್ಲಿ ಮನೆ, ಪಿಜಿ, ಹಾಸ್ಟೆಲ್ ಮಾಲೀಕರು ಎಂದಿನಂತೆ ಬಾಡಿಗೆ ವಸೂಲಿಗೆ ಇಳಿಯದೆ ಉದಾರತೆ ತೋರಲಿ. ಸರಕಾರ ಬಾಡಿಗೆ ವಿನಾಯಿತಿ ಘೋಷಿಸಿ ಜನಸಾಮಾನ್ಯನ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.