ಬೀಜಿಂಗ್: ದ್ವೀಪರಾಷ್ಟ್ರದ ಆಯಕಟ್ಟಿನ ಪ್ರದೇಶದಲ್ಲಿರುವ ಹಂಬಂಟೋಟ ಬಂದರಿನಲ್ಲಿ 4.5 ಶತಕೋಟಿ ಡಾಲರ್ ವೆಚ್ಚದ ಪೆಟ್ರೋಲಿಯಂ ಸಂಸ್ಕರಣಾ ಘಟಕ ಸ್ಥಾಪಿಸಲು ಚೀನಾದ ಸಂಸ್ಥೆಗೆ ಶ್ರೀಲಂಕಾ ಸಚಿವ ಸಂಪುಟ ಅನುಮತಿ ನೀಡಿದೆ ಎಂದು ಚೀನಾ ಸರಕಾರದ ಮೂಲಗಳು ಮಾಹಿತಿ ನೀಡಿದೆ.
ಈ ಹೇಳಿಕೆಯನ್ನು ದೃಢಪಡಿಸಿರುವ ಶ್ರೀಲಂಕಾದ ಇಂಧನ ಸಚಿವ ಕಾಂಚನ ವಿಜೆಸೇಕರ, ಚೀನಾದ ಬೃಹತ್ ಇಂಧನ ಸಂಸ್ಥೆ ಸಿನೊಪೆಕ್ ಹಂಬಂಟೋಟ ಬಂದರಿನಲ್ಲಿ ಪೆಟ್ರೋಲಿಯಂ ಸಂಸ್ಕರಣಾ ಘಟಕವನ್ನು ನಿರ್ಮಿಸಲಿದ್ದು ಇದು ಶ್ರೀಲಂಕಾದಲ್ಲಿ ವಿದೇಶಿ ಸಂಸ್ಥೆಯೊಂದರ ಅತ್ಯಧಿಕ ನೇರ ಹೂಡಿಕೆಯಾಗಲಿದೆ. ಇದರ ಜತೆಗೆ ತರಬೇತಿ ಕೇಂದ್ರವೂ ಕಾರ್ಯಾರಂಭ ಮಾಡಲಿದೆ. ಈ ಯೋಜನೆಗೆ ಸಚಿವ ಸಂಪುಟ ಸೋಮವಾರ ಅನುಮೋದನೆ ಮಂಜೂರುಗೊಳಿಸಿದೆ ಎಂದಿದ್ದಾರೆ. ಕೊಲಂಬೊ ಬಂದರಿನ ಬಳಿಕ ಶ್ರೀಲಂಕಾದ ಅತೀ ದೊಡ್ಡ ಬಂದರು ಆಗಿರುವ ಹಂಬಂಟೋಟ 2010ರಲ್ಲಿ ಕಾರ್ಯಾರಂಭ ಮಾಡಿದ್ದು 2017ರಿಂದ ಇದು ಚೀನಾ-ಶ್ರೀಲಂಕಾ ಜಂಟಿ ನಿರ್ವಹಣೆ ವ್ಯವಸ್ಥೆಯಲ್ಲಿದೆ.