ಕೇವಲ 1 ಎಸೆತದಲ್ಲಿ 17 ರನ್ ನೀಡಿದ ಬೌಲರ್ ಬಗ್ಗೆ ನೀವು ಕೇಳಿದ್ದೀರಾ..?; ಇಲ್ಲಿದೆ ಮಾಹಿತಿ
ಕೊರೋನಾ ವೈರಸ್ನಿಂದಾಗಿನ ಕ್ರಿಕೆಟ್ ಜಗತ್ತು ಸ್ತಬ್ದಗೊಂಡಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿ ಅರ್ಧದಲ್ಲೇ ಮೊಟಕುಗೊಂಡರೆ, ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಸ್ಥಿತಿ ತೂಗುಯ್ಯಾಲೆಯಲ್ಲಿದೆ. ಲಾಕ್ಡೌನ್ನಿಂದಾಗಿ ಕ್ರಿಕೆಟ್ ಆಟಗಾರರೆಲ್ಲ ಮನೆಯಲ್ಲಿಯೇ ಕುಳಿತು ಸಮಯ ಕಳೆಯುತ್ತಿದ್ದಾರೆ.
ಹೀಗಿರುವಾಗ ಈ ಹಿಂದೆ ಕ್ರಿಕೆಟ್ನಲ್ಲಿ ನಡೆದ ವಿಚಿತ್ರ ಘಟನೆಗಳ ಕುರಿತು ಕೆಲವೊಂದು ಮಾಹಿತಿಯನ್ನು ಮೆಲುಕು ಹಾಕೋಣ. ಕ್ರಿಕೆಟ್ ಅಂದಮೇಲೆ ಒಂದಲ್ಲಾ ಒಂದು ವಿಚಿತ್ರ ಘಟನೆಗಳು ನಡೆಯುತ್ತಲೆ ಇರುತ್ತದೆ. ಇದೇ ಸಾಲಿಗೆ ಕಳೆದ ವರ್ಷ ಹೊಸ ಸೇರ್ಪಡೆಯಾಗಿದ್ದು ಆಸ್ಟ್ರೇಲಿಯಾ ಬೌಲರ್ ಒಬ್ಬ ತನ್ನ ಒಂದೇ ಎಸೆತದಲ್ಲಿ ಬರೋಬ್ಬರಿ 17 ರನ್ ನೀಡಿರುವುದು. ಹೇಗೆ ಅಂತಿರ ಈ ಸ್ಟೋರಿ ಓದಿ..
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬ್ಯಾಶ್ ಲೀಗ್ ಟೂರ್ನಿನಲ್ಲಿ ಈ ಘಟನೆ ನಡೆದಿದೆ. ಹಾಬರ್ಟ್ ಹರಿಕೇನ್ಸ್ ತಂಡದ ಬೌಲರ್ ರಿಲೆ ಮೆರೆಡಿತ್ ತನ್ನ 1 ಎಸೆತದಲ್ಲಿ 17 ರನ್ ನೀಡಿದವರಾಗಿದ್ದಾರೆ. ಹಾಬರ್ಟ್ ತಂಡದ ನೀಡಿದ್ದ 184 ರನ್ಗಳ ಸವಾಲು ಸ್ವೀಕರಿಸಿದ ಮೆಲ್ಬೋರ್ನ್ ರೆನೆಗೇಡ್ಸ್ ತಂಡಕ್ಕೆ ಮೊದಲ ಓವರ್ನಲ್ಲೇ ಒಟ್ಟು 23 ರನ್ ದಕ್ಕಿತು.
ಮೊದಲ ಓವರ್ನ ಮೆರೆಡಿತ್ ಅವರ ಒಂದು ಹಾಗೂ ಎರಡನೇ ಎಸೆತ ಡಾಟ್ ಬಾಲ್ ಆದರೆ, ಮೂರನೇ ಎಸೆತದಲ್ಲಿ 1 ರನ್ ಬಂತು. 4ನೇ ಎಸೆತ ನೋಬಾಲ್ ಆಗಿದೆ. ಹೀಗಾಗಿ ಮತ್ತೆ 4ನೇ ಎಸೆತ ಎಸೆದಿದ್ದು ಬಾಲ್ ವೈಡ್ ಜೊತೆಗೆ ಬೌಂಡರಿ ಗೆರೆ ದಾಟಿದೆ. ವೈಡ್ ಆಗಿದ್ದರಿಂದ ನೋ ಬಾಲ್ ಹಾಗೆ ಉಳಿದಿದ್ದು, ಮುಂದಿನ ಎಸೆತದಲ್ಲಿ ಬ್ಯಾಟ್ಸ್ಮನ್ ಬೌಂಡರಿ ಬಾರಿಸಿದ್ದಾನೆ.
ಗ್ರಹಚಾರ ಎಂದರೆ ಈ ಎಸೆತವು ನೋ ಬಾಲ್ ಆಗಿದೆ. ಹೀಗಾಗಿ ಮತ್ತೊಂದು ನೋ ಬಾಲ್ನಲ್ಲಿ ಬ್ಯಾಟ್ಸ್ಮನ್ ಚೆಂಡನ್ನು ಮತ್ತೆಮ್ಮೆ ಬೌಂಡರಿಗೆ ಅಟ್ಟಿದ್ದಾನೆ. ಈ ಮೂಲಕ ಬೌಲರ್ನ ಒಂದು ಎಸೆತ ಮುಗಿವ ಹೊತ್ತಿಗೆ 17 ರನ್ ಮೂಡಿಬಂದಿದೆ.