ರಾಮನಗರದಲ್ಲಿ ತಮಿಳುನಾಡು ಗಡಿ ಸಂಪೂರ್ಣ ಬಂದ್: ಎಸ್ಪಿ ಅನೂಪ್ ಕಟ್ಟುನಿಟ್ಟಿನ ಕ್ರಮ
ರಾಮನಗರ(ಏ. 11): ಕೊರೋನಾ ಸೋಂಕು ಹರಡುವುದನ್ನು ನಿಗ್ರಹಿಸಲು ಮುನ್ನೆಚ್ಚರಿಕೆಯಾಗಿ ಜಿಲ್ಲೆಗೆ ಸೇರಿದ ಕರ್ನಾಟಕ-ತಮಿಳುನಾಡು ಗಡಿ ಭಾಗವನ್ನು ಬಂದ್ ಮಾಡಲಾಗಿದೆ. ಕರ್ನಾಟಕದಿಂದ ತಮಿಳುನಾಡಿಗೆ, ಅಥವಾ ತಮಿಳುನಾಡಿನಿಂದ ಕರ್ನಾಟಕಕ್ಕೆ ಯಾವುದೇ ಸಂಚಾರಕ್ಕೆ ಅವಕಾಶವಿರಬಾರದು ಎಂದು ರಾಮನಗರ ಜಿಲ್ಲಾ ಎಸ್ಪಿ ಅನೂಪ್ ಎ ಶೆಟ್ಟಿ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಹೊರರಾಜ್ಯಗಳಿಂದ ಜನರು ರಾಜ್ಯಕ್ಕೆ ಬಂದ್ರೆ ಕೊರೋನಾ ವೈರಸ್ ಹರಡೋ ಸಾಧ್ಯತೆಯಿರುವ ಕಾರಣ ಈ ಕ್ರಮವಹಿಸಲಾಗಿದೆ.
ಸ್ಥಳದಲ್ಲಿ 4 ಜನ ಪೊಲೀಸ್ ಸಿಬ್ಬಂದಿ, ಇಬ್ಬರು ಆಶಾ ಕಾರ್ಯಕರ್ತೆಯರು ಮೊಕ್ಕಾಂ ಹೂಡಿದ್ದಾರೆ. ಬ್ಯಾರಿಕೇಡ್ಗಳನ್ನ ಅಳವಡಿಸಿ ಪೊಲೀಸರು ಗಡಿ ಬಂದ್ ಮಾಡಿದ್ದಾರೆ. ಜಿಲ್ಲೆಯ ಕನಕಪುರ ತಾಲೂಕಿನ ಹುಣಸನಹಳ್ಳಿ ಗ್ರಾಮದ ಗಡಿ ಬಂದ್ ಮಾಡಲಾಗಿದೆ. ಹುಣಸನಹಳ್ಳಿ ಗ್ರಾಮವು ಕರ್ನಾಟಕ, ತಮಿಳುನಾಡು ರಾಜ್ಯಕ್ಕೆ ಗಡಿ ಪ್ರದೇಶವಾಗಿದೆ.
ಇನ್ನು, ರಾಮನಗರ ಜಿಲ್ಲೆಯಲ್ಲಿ ಲಾಕ್ ಡೌನ್ ಉಲ್ಲಂಘನೆ ಸಂಬಂಧ ನಿನ್ನೆ ಶುಕ್ರವಾರ ಒಂದೇ ದಿನ ಜಿಲ್ಲೆಯಲ್ಲಿ 24 ಪ್ರಕರಣ ದಾಖಲಾಗಿವೆ. ಲಾಕ್ ಡೌನ್ ನಡುವೆಯೂ ಅನಾವಶ್ಯಕವಾಗಿ ರಸ್ತೆಗಿಳಿದು ಓಡಾಡುವ ಜನರ ಮೇಲೆ ಕೇಸ್ ಬೀದಿದ್ದು 24 ಪ್ರಕರಣದಲ್ಲಿ 24 ಜನರ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ. ಜೊತೆಗೆ ಕಾನೂನು ಉಲ್ಲಂಘಿಸಿ ಅಂಗಡಿ ಓಪನ್ ಮಾಡಿದ ಆರೋಪದಡಿ ಮಾಲೀಕರ ಮೇಲೂ ಕೇಸ್ ದಾಖಲಾಗಿದ್ದು 5 ಹೋಟೆಲ್, 6 ಟೀ ಅಂಗಡಿ, ಹಾರ್ಡ್ ವೇರ್ ಶಾಪ್ ಮಾಲೀಕರ ಮೇಲೆ ಪ್ರಕರಣ ದಾಖಲಾಗಿವೆ.
ಇದನ್ನೂ ಓದಿ: ಶಲ್ಯವನ್ನೇ ಮಾಸ್ಕ್ ಮಾಡಿಕೊಂಡ ಮೋದಿ; ಸಿಎಂಗಳೊಂದಿಗಿನ ವಿಡಿಯೋ ಕಾನ್ಫೆರೆನ್ಸ್ನಲ್ಲಿ ಪ್ರಧಾನಿ ಜಾಗೃತಿ ಸಂದೇಶ
ಚನ್ನಪಟ್ಟಣದ ಕೋಡಂಬಳ್ಳಿಯಲ್ಲಿ ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ಯುವಕರನ್ನು ನಿಲ್ಲಿಸಿ ಪೊಲೀಸರು 10 ಬೈಟಕ್ ಹೊಡೆಸಿದರು.
ಅಕ್ರಮವಾಗಿ ನೀರಾ ಮಾರಾಟ ಹಾಗೂ ಜೂಜಾಡುತ್ತಿದ್ದ ವಿಚಾರವಾಗಿ 10 ಕ್ಕೂ ಹೆಚ್ಚು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ ಜಿಲ್ಲೆಯ ಪೊಲೀಸರು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಲಾಕ್ ಡೌನ್ ಉಲ್ಲಂಘನೆ ಕಾನೂನು ಮತ್ತಷ್ಟು ಬಿಗಿಯಾಗಲಿದೆ ಎಂದು ನ್ಯೂಸ್ 18 ಗೆ ಎಸ್ಪಿ ಅನೂಪ್ ಎ ಶೆಟ್ಟಿ ಮಾಹಿತಿ ನೀಡಿದ್ದಾರೆ.