ಆಕ್ಸ್ಫರ್ಡ್ ಮಹಿಳಾ ವಿಜ್ಞಾನಿ ಪರಿಶ್ರಮ: ಕೆಲವೇ ತಿಂಗಳಲ್ಲಿ ಕೊರೋನಾಗೆ ಲಸಿಕೆ ಲಭ್ಯ ಸಾಧ್ಯತೆ
ಲಂಡನ್(ಏ. 18): ಎಷ್ಟೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡರೂ ವಿಶ್ವದ ಹಲವೆಡೆ ಕೊರೋನಾ ಸೊಂಕು ಹರಡುವುದನ್ನು ನಿಯಂತ್ರಿಸುವುದು ಬಹಳ ಕಷ್ಟವಾಗುತ್ತಿದೆ. ಲಸಿಕೆಯ ಮಾತಿರಲಿ ಇನ್ನೂ ಔಷಧವನ್ನೇ ಕಂಡುಹಿಡಿಲು ಸಾಧ್ಯವಾಗಿಲ್ಲ. ಇದಾಗುವಷ್ಟರಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ಹೆಣಗಳು ಉರುಳಬೇಕಾಗಬಹುದು. ಈ ಹೊತ್ತಿನಲ್ಲಿ ಬ್ರಿಟನ್ ದೇಶದ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಯೊಬ್ಬರು ಲಸಿಕೆ ಅಭಿವೃದ್ಧಿಪಡಿಸಿದ್ಧಾರೆಂಬ ಸುದ್ದಿ ಇದೆ.
ವಿಶ್ವವಿದ್ಯಾಲಯದ ಲಸಿಕೆ ಶಾಸ್ತ್ರ (ವ್ಯಾಕ್ಸಿನೋಲಜಿ) ವಿಭಾಗದ ಪ್ರೊಫೆಸರ್ ಸಾರಾ ಗಿಲ್ಬರ್ಟ್ ಅವರು ಈಗಾಗಲೇ ಲಸಿಕೆ ತಯಾರಿಸಿದ್ದಾರೆ. ಈಗ ಅದನ್ನು ಮನುಷ್ಯರ ಮೇಲೆ ಪ್ರಯೋಗ ಮಾಡುವುದಷ್ಟೇ ಬಾಕಿ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ ತಿಂಗಳಲ್ಲಿ ಈ ಲಸಿಕೆ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಕೋವಿಡ್ ಬಿಕ್ಕಟ್ಟಿನಲ್ಲಿ ಭಾರತದ ಸಹಾಯಹಸ್ತ: ವಿಶ್ವಸಂಸ್ಥೆ ಮೆಚ್ಚುಗೆ
ಮೇ ತಿಂಗಳಲ್ಲಿ, ಅಂದರೆ ಮುಂದಿನ ತಿಂಗಳಿನಿಂದ ಮನುಷ್ಯರ ಮೇಲೆ ಪ್ರಯೋಗ ಪ್ರಾರಂಭವಾಗಲಿದೆ. ಈ ಪ್ರಯೋಗಕ್ಕೆ ಒಡ್ಡಿಕೊಳ್ಳಲು 500 ಮಂದಿ ಈಗಾಗಲೇ ಮುಂದೆ ಬಂದಿದ್ಧಾರೆನ್ನಲಾಗಿದೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಲಸಿಕೆ ವಿಭಾಗದಲ್ಲಿ ಅನುಭವಿಯಾಗಿರುವ ಸಾರಾ ಗಿಲ್ಬರ್ಟ್ ಅವರಿಗೆ ಮಾರ್ಚ್ ತಿಂಗಳಲ್ಲಿ ಲಸಿಕೆ ತಯಾರಿಸುವ ಜವಾಬ್ದಾರಿ ನೀಡಲಾಗಿತ್ತು. ಅದಕ್ಕಾಗಿ 2.8 ಮಿಲಿಯನ್ ಡಾಲರ್ (ಸುಮರು 2 ಸಾವಿರ ಕೋಟಿ ರೂ) ಹಣ ಕೊಡಲಾಗಿದೆ. ಸಾರಾ ಗಿಲ್ಬರ್ಟ್ ತನ್ನ ತಂಡದ ಇತರ ಸದಸ್ಯರ ಜೊತೆ ಹಗಲಿರುಳು ಲಸಿಕೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ವಿಶ್ವದ ಇತರೆಡೆಯೂ ಲಸಿಕೆ ತಯಾರಿಗೆ ಸತತ ಪ್ರಯತ್ನಗಳು ನಡೆದಿವೆ. ವಿಶ್ವ ಆರೋಗ್ಯ ಸಂಸ್ಥೆಯು 70 ಲಸಿಕೆ ಅಭಿವೃದ್ಧಿ ಕಾರ್ಯಕ್ಕೆ ಮಾನ್ಯತೆ ನೀಡಿದೆ. ಸಾರಾ ಗಿಲ್ಬರ್ಟ್ ಅವರಲ್ಲದೇ ಇನ್ನೂ ಮೂರು ಲಸಿಕೆಗಳು ಈಗಾಗಲೇ ಮಾನವ ಪ್ರಯೋಗದ ಹಂತಕ್ಕೆ ಹೋಗಿವೆ.