ಮಧ್ಯಪ್ರದೇಶದಲ್ಲಿ ಪೌರ ಕಾರ್ಮಿಕರ ಮೇಲೆ ಕೊಡಲಿಯಿಂದ ಹಲ್ಲೆ ; ನಾಲ್ವರ ಬಂಧನ
ನವದೆಹಲಿ: ಇಬ್ಬರು ಪೌರಕಾರ್ಮಿಕರ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿರುವ ಘಟನೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಖತೇಗಾಂವ್ ಪಟ್ಟಣದ ಅಲ್ಪಸಂಖ್ಯಾತ ಪ್ರಾಬಲ್ಯದ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಹಲ್ಲೆಯನ್ನು ಖಂಡಿಸಿ ಶನಿವಾರ ಪೌರಕಾರ್ಮಿಕರು ಮುಸ್ಲಿಂ ಪ್ರಾಬಲ್ಯದ ಖತೇಗಾಂವ್ನಲ್ಲಿ ಕೆಲಸ ನಿರ್ವಹಿಸದ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ ಎಂದು ಗ್ರಾಮೀಣ ಪ್ರದೇಶದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ನೀರಜ್ ಚೌರಾಸಿಯಾ ತಿಳಿಸಿದ್ದಾರೆ.
ಕೊಯ್ಲಾ ಮೊಹಲ್ಲಾ ನಿವಾಸಿ ಆದಿಲ್ ಖಾನ್ ಅವರು ಶುಕ್ರವಾರ ಪೌರಕಾರ್ಮಿಕರು ಸ್ವಚ್ಛ ಗೊಳಿಸುವಾಗ ಕೊಡಲಿಯಿಂದ ಹಲ್ಲೆ ಮಾಡಿದ್ದಾರೆ. ದಾಳಿಯಿಂದಾಗಿ ಇಬ್ಬರು ಕಾರ್ಮಿಕರಲ್ಲಿ ಓರ್ವ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪೌರಕಾರ್ಮಿಕರಿಗೆ ಧೈರ್ಯ ತುಂಬುವ ಉದ್ದೇಶದೊಂದಿಗೆ ಕೆಲವು ಪೌರ ಕಾರ್ಮಿಕರೊಂದಿಗೆ ಮಾತುಕತೆ ನಡೆಸಲು ನಾನು ಖತೇಗಾಂವ್ಗೆ ಹೋಗುತ್ತಿದ್ದೇನೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.