EBM News Kannada
Leading News Portal in Kannada

ಏಪ್ರಿಲ್ 20ರ ಬಳಿಕ ಲಾಕ್‌ಡೌನ್‌ನಿಂದ ಯಾವ್ಯಾವುದಕ್ಕೆ ವಿನಾಯಿತಿ ಸಿಗಬಹುದು?

0

ನವದೆಹಲಿ: ಬಹಳಷ್ಟು ಕ್ರಮ ಕೈಗೊಂಡ ನಡುವೆಯೂ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮೇ 3ರವರೆಗೂ ಲಾಕ್​ಡೌನ್ ವಿಸ್ತರಣೆ ಮಾಡಲಾಗಿದೆ. ಲಾಕ್​ಡೌನ್ ಘೋಷಣೆ ಮಾಡಿದ ಪ್ರಧಾನಿ ಮೋದಿ, ಹೊಸ ಹಾಟ್ ಸ್ಪಾಟ್ ಹುಟ್ಟಿಕೊಳ್ಳದ ಕಡೆ ಏಪ್ರಿಲ್ 20ರ ಬಳಿಕ ಲಾಕ್​ಡೌನ್ ಸಡಿಲಿಸುವ ಸುಳಿವನ್ನೂ ನೀಡಿದ್ದಾರೆ‌. ಹಾಗಾದರೆ ಏಪ್ರಿಲ್ 20ರ ಬಳಿಕ ಯಾವ್ಯಾವ ವಿನಾಯಿತಿ ಸಿಗಬಹುದು? ಎಂಬುದನ್ನು ನೋಡೋಣ…

ಕೊರೋನಾ ಸೋಂಕು ಹರಡದಂತೆ ತಡೆಯಲು ಲಾಕ್​ಡೌನ್ ಒಂದೇ ಉಳಿದಿರುವ ಮಾರ್ಗ. ಆದರೂ ಲಾಕ್​ಡೌನ್ ಜನರ ನಿತ್ಯ ಜೀವನದ ಮತ್ತು ದೇಶದ ಆರ್ಥಿಕ ದೃಷ್ಟಿಯಿಂದ ಭರಿಸಲಾರದ ಹೊರೆ‌. ಆದುದರಿಂದಲೇ ಲಾಕ್​ಡೌನ್ ನಿಂದ ಯಾವಾಗ ಮುಕ್ತಿ ಸಿಗುವುದೋ ಎಂದು ಜನ ಕಾಯುತ್ತಾ ಕುಳಿತಿರುವುದು. ಏಪ್ರಿಲ್ 20ರ ಬಳಿಕ ಲಾಕ್​ಡೌನ್ ಸಡಿಲವಾಗಲಿದೆ ಎಂಬ ಬಗ್ಗೆ ಆಸೆಗಣ್ಣಿನಿಂದ ನೋಡುತ್ತಿರುವುದು.

ಲಾಕ್​ಡೌನ್ ಸಡಿಲಿಕೆ ಬಗ್ಗೆ ಮಾತನಾಡಿದ ಮೋದಿ‌ ‘ಹೊಸ ಹಾಟ್ ಸ್ಪಾಟ್ ಹುಟ್ಟಿಕೊಳ್ಳದ ಕಡೆ’ ಎಂಬುದನ್ನು ಉಲ್ಲೇಖಿಸಿದ್ದಾರೆ. ಆದುದರಿಂದ ಹಾಟ್ ಸ್ಪಾಟ್‌ಗಳನ್ನು ಗುರುತಿಸುವ ಕಾರ್ಯ ಗಮನಾರ್ಹವಾಗಿ ನಡೆಯುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಾಟ್ ಸ್ಪಾಟ್ ಗುರುತಿಸುವುದು ಸೋಂಕು ಮತ್ತೊಂದು ಕಡೆ ಹರಡದಿರಲಿ ಎಂದು ತೀವ್ರ ನಿಗಾ‌ ಇರಿಸಲು. ಹಾಟ್ ಸ್ಪಾಟ್ ಗಳಲ್ಲಿ ನಿಗಾ ಇರಿಸಿ ಅಲ್ಲಿನ‌ ಸೋಂಕು ಪ್ರಮಾಣವನ್ನು ಶಮನ ಮಾಡುವುದರ ಜೊತೆಗೆ ಅದು ಬೇರೆಡೆಗೆ ಹರಡದಂತೆ ನೋಡಿಕೊಂಡರೆ ಕೊರೋನಾ ಎಂಬ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ‌ ಅರ್ಧ ಗೆದ್ದಂತೆ.

ಹೀಗೆ ಪರಿಸ್ಥಿತಿಯನ್ನು ಅವಲೋಕಿಸಿ ದೇಶದಲ್ಲಿ ಕೊರೋನಾ ಪೀಡಿತ ಪ್ರದೇಶಗಳನ್ನು ಕೆಂಪು, ಹಳದಿ, ಹಸಿರು ಎಂದು ಮೂರು ವಲಯಗಳನ್ನಾಗಿ ವಿಂಗಡಿಸಲಾಗುತ್ತದೆ. ಬಳಿಕ ಈ ವಲಯಗಳ ಆಧಾರದ ಮೇಲೆ ಎಲ್ಲಿ‌ ಯಾವ ರೀತಿ ‌ಕ್ರಮಗಳನ್ನು ಜರುಗಿಸಬೇಕು‌ ಎಂದು ನಿರ್ಧರಿಸಲಾಗುತ್ತದೆ.

ಹಸಿರು ವಲಯ

ಕೊರೋನಾ ಸೋಂಕು ಇಲ್ಲದ ಪ್ರದೇಶಗಳನ್ನು ಹಸಿರು ವಲಯ ಎಂದು ಘೋಷಿಸುವ ಮೂಲಕ ಅಂತಹ ಪ್ರದೇಶಗಳಲ್ಲಿ ಲಾಕ್‌ಡೌನ್‌ ತೆರವುಗೊಳಿಸುವ ಸಾಧ್ಯತೆ ಇದೆ. ಈ ಮೂಲಕ ಹಸಿರು ವಲಯದಲ್ಲಿ ಈಗ ನನೆಗುದಿಗೆ ಬಿದ್ದಿರುವ ಉತ್ಪಾದನೆಗೆ ಒತ್ತು‌ ಕೊಡಬಹುದು. ವಿಶೇಷವಾಗಿ ಕೃಷಿ ಚಟುವಟಿಕೆ, ಸ್ಥಳೀಯ ಕಾರ್ಖಾನೆಗಳನ್ನು ತೆರೆಯಲು ಅವಕಾಶ ಕೊಡಬಹುದು. ಜನರಿಗೆ ದಿನನಿತ್ಯಕ್ಕೆ ಬೇಕಾಗುವ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಬಹುದು. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರಲಿದೆ.

ಹಳದಿ ವಲಯಕೊರೋನಾ ಸೋಂಕು ಹರಡುವಿಕೆ ಕಡಿಮೆ ಪ್ರಮಾಣದಲ್ಲಿರುವ ಪ್ರದೇಶಗಳನ್ನು ಹಳದಿ ವಲಯ ಎಂದು ಘೋಷಿಸಿ ಅಂತಹ ಪ್ರದೇಶಗಳಲ್ಲಿ ಲಾಕ್‌ಡೌನ್‌ ಅನ್ನು ಭಾಗಶಃ ಕಡಿಮೆ ಮಾಡುವ ನಿರೀಕ್ಷೆಯಿದೆ. ಇಂತಹ ಪ್ರದೇಶಗಳಲ್ಲಿ ಜನರಿಗೆ ದಿನನಿತ್ಯದ ಅವಶ್ಯಕ ವಸ್ತುಗಳನ್ನು ಕೊಂಡುಕೊಳ್ಳಲು ದಿನ ಬಿಟ್ಟು ದಿನ ಅವಕಾಶ ನೀಡಬಹುದು. ಕೃಷಿ ಚಟುವಟಿಕೆಗಳಿಗೆ ಮಾತ್ರ ಸಂಪೂರ್ಣ ವಿನಾಯಿತಿ ನೀಡಬಹುದು. ಮುನ್ನೆಚ್ಚರಿಕಾ ಕ್ರಮವಾಗಿ ಜನರನ್ನು ರಸ್ತೆಗಿಳಿಯದಂತೆ ಕ್ರಮ ಕೈಗೊಳ್ಳಬಹುದು.

ಕೆಂಪು ವಲಯ

ಕೊರೋನಾ ಸೋಂಕು ತೀವ್ರ ಪ್ರಮಾಣದಲ್ಲಿರುವ ಪ್ರದೇಶಗಳನ್ನು ಕೆಂಪು ವಲಯ ಅಥವಾ ಹಾಟ್ ಸ್ಪಾಟ್ ಎಂದು ಕರೆಯಲಾಗುತ್ತದೆ. ಕೆಂಪು ವಲಯಗಳೆಂದು ಘೋಷಿಸಲ್ಪಟ್ಟ ಪ್ರದೇಶಗಳಲ್ಲಿ ಸಂಪೂರ್ಣವಾಗಿ ಸೀಲ್ ಡೌನ್ ಮಾಡುವ ನಿರೀಕ್ಷೆಯಿದೆ. ಇಂತಹ ಪ್ರದೇಶಗಳಲ್ಲಿ ನಿಗದಿತ ಸಮಯದಲ್ಲಿ ಮಾತ್ರವೇ ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಜನರು ರಸ್ತೆಗೆ ಬರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ವಾಹನ ಸಂಚಾರವನ್ನು ನಿಷೇಧಿಸಲಾಗುತ್ತದೆ.

Leave A Reply

Your email address will not be published.