EBM News Kannada
Leading News Portal in Kannada

ಹಾವೇರಿಯಲ್ಲಿ ಮನೆ ಬಾಗಿಲಿಗೆ ತರಕಾರಿ; ಟೆಕ್ಕಿಗಳ ಕಾರ್ಯಕ್ಕೆ ಭಾರೀ ಮೆಚ್ಚುಗೆ

0

ಹಾವೇರಿ (ಏ 9): ಕೊರೋನಾದಿಂದಾಗಿ 21 ದಿನಗಳ ಕಾಲ ಲಾಕ್​ಡೌನ್​ ಘೋಷಿಸಲಾಗುತ್ತದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಬೆಂಗಳೂರಿಗರೆಲ್ಲ ಊರು ಸೇರಿಕೊಂಡಿದ್ದಾರೆ. ಹಳ್ಳಿಗಳಿಗೆ ವಾಪಾಸ್ ಹೋದವರು ತಮ್ಮ ಮನೆಗಳಲ್ಲಿ ಸುರಕ್ಷಿತವಾಗಿದ್ದಾರೆ. ಆದರೆ, ಹಾವೇರಿಯ ಕೆಲವು ಸಾಫ್ಟ್​ವೇರ್ ಇಂಜಿನಿಯರ್​ಗಳು ಕೇವಲ ತಮ್ಮ ಸುರಕ್ಷತೆಯನ್ನಷ್ಟೇ ನೋಡದೆ ಊರಿನವರ ಆರೋಗ್ಯ ಮತ್ತು ಅಗತ್ಯಕ್ಕಾಗಿ ಸಹಾಯ ಮಾಡಲು ನಿಂತಿದ್ದಾರೆ.

ಹಾವೇರಿಗೆ ಬೆಂಗಳೂರಿಂದ ವಾಪಸಾದ ಟೆಕ್ಕಿಗಳು ತಮ್ಮ ನಗರದ ಜನರ ಆರೋಗ್ಯಕ್ಕಾಗಿ, ಜೀವ ರಕ್ಷಣೆಗಾಗಿ ತರಕಾರಿ ಅಂಗಡಿ ತೆರೆದಿದ್ದಾರೆ‌. ಸಾಫ್ಟ್‌ವೇರ್‌ ಉದ್ಯೋಗಿಗಳಾದ ಸುಶೀಲೇಂದ್ರ ಕುಲಕರ್ಣಿ, ಪವನ್ ಕುಲಕರ್ಣಿ ಎಂಬುವವರು ನಗರದ ದತ್ತಾತ್ರೇಯ ದೇವಸ್ಥಾನ ಬಳಿ ತರಕಾರಿ ಅಂಗಡಿ ಪ್ರಾರಂಭಿಸಿದ್ದಾರೆ‌. ತರಕಾರಿ ಖರೀದಿಗೆ ಜನ ಹೊರಬಂದರೆ ಕೊರೋನಾ ವೈರಸ್ ದಾಳಿ ಮಾಡಬಹುದು ಎಂಬ ಕಾರಣಕ್ಕೆ ‘ನೀವು ಮನೆಯಲ್ಲೇ ಇರಿ, ನಾವು ನಿಮ್ಮ ಮನೆಗೆ ತರಕಾರಿ ತಂದು ಮುಟ್ಟಿಸುತ್ತೇವೆ’ ಎನ್ನುತ್ತಿರುವ ಇವರು ಸ್ಟೇ ಸೇಫ್ ಹಾವೇರಿ ಡಾಟ್ ಕಾಂ (StaySafeHaveri.in) ಎಂಬ ವೆಬ್​ಸೈಟ್ ಮೂಲಕ ಆನ್​ಲೈನ್​ನಲ್ಲಿ ತರಕಾರಿ ಖರೀದಿಗೆ ವೇದಿಕೆ ಒದಗಿಸಿಕೊಟ್ಟಿದ್ದಾರೆ‌.
ಬೆಂಗಳೂರಿನಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ಇವರು ಲಾಕ್​ಡೌನ್​ ಅವಧಿಯಲ್ಲಿ ಮನೆಯಲ್ಲಿ ಕಾಲಹರಣ ಮಾಡದೆ, ಆನ್​ಲೈನ್ ಮಾಡುವವರ ಮನೆಗೆ ತರಹೇವಾರಿ ತರಕಾರಿ ನೀಡಿ ಬರುತ್ತಿದ್ದಾರೆ. ಹಾವೇರಿ ಮೂಲದ ಬೆಂಗಳೂರು ಟೆಕ್ಕಿಗಳ ಈ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ‌.

Leave A Reply

Your email address will not be published.