ಮಾನವೀಯತೆ ಮೆರೆದ ಕೆಐಎಎಲ್ ಸಿಬ್ಬಂದಿ: ಪ್ರತಿನಿತ್ಯ 12 ಸಾವಿರ ಮಂದಿಗೆ ಉಚಿತ ಊಟ ವಿತರಣೆ
ದೇವನಹಳ್ಳಿ(ಏ.09): ದೇಶದೆಲ್ಲೆಡೆ ಕೊರೋನಾ ಅಟ್ಟಹಾಸ ಮಿತಿ ಮೀರಿದೆ. ಇದರ ತಡೆಗೆ ಪ್ರಧಾನಿ ನರೇಂದ್ರ ಮೋದಿ ಆದೇಶದಂತೆ ಲಾಕ್ಡೌನ್ ಮಾಡಿದರೂ ಜನ ಯಾವುದನ್ನು ಲೆಕ್ಕಿಸದೇ ಬೀದಿಯಲ್ಲಿ ಓಡಾಡುತ್ತಿದ್ದಾರೆ. ಹೀಗಿದ್ದರೂ ಜನರನ್ನು ಕೊರೋನಾದಿಂದ ಪಾರು ಮಾಡಲು ತಮ್ಮ ಜೀವನವನ್ನೇ ಮುಡಿಪಾಗಿಸಿ ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ದುಡಿಯುತ್ತಿದ್ದಾರೆ. ಹೀಗೆ ಜನರ ಸೇವೆ ಮಾಡುತ್ತಿರುವವರ ಹಸಿವಿಗೆ ಕೆಐಎಎಲ್ ಸಿಬ್ಬಂದಿ ಮನ ಮಿಡಿಡಿದೆ. ಹಾಗಾಗಿಯೇ ವೈದ್ಯರು, ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿಗೆ ಪ್ರತಿನಿತ್ಯ ಶುಚಿ ರುಚಿಯಾದ ಊಟ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಇತ್ತೀಚೆಗೆ ಗೌರಿಬಿದನೂರಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಸಿದವರ ಹೊಟ್ಟೆ ತುಂಬಿಸಲು ಕೆಇಎಎಲ್ ಸಿಬ್ಬಂದಿ ಹಗಲು ರಾತ್ರಿಯೆನ್ನದೇ ದುಡಿಯುತ್ತಿದ್ದಾರೆ. ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಹೊತ್ತಿಗೆ 12 ಸಾವಿರ ಮಂದಿಗೆ ಊಟದ ಜೊತೆಗೆ ಬಾಳೆಹಣ್ಣು, ನೀರಿನ ಬಾಟೆಲ್ನೊಂದಿಗೆ ಏನಾದರೂ ಸಿಹಿ ತಿನಿಸು ವಿತರಣೆ ಮಾಡುತ್ತಿದ್ದಾರೆ.
ಇನ್ನು, ನಿರ್ಗತಿಕರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ತಮ್ಮ ಕೈಲಾದ ಅಳಿಲು ಸೇವೆ ಮಾಡುತ್ತಿದ್ದಾರೆ. ಕೆಐಎಎಲ್ನ ಸುಮಾರು 40 ಅಧಿಕಾರಿಗಳು ಮತ್ತು 140ಕ್ಕೂ ಹೆಚ್ಚು ಸಹೋದ್ಯೋಗಿಗಳು ಈ ಕಾರ್ಯದಲ್ಲಿ ತೊಡಗಿದ್ದಾರೆ.