EBM News Kannada
Leading News Portal in Kannada

ಅಮ್ಮನ ಜೊತೆ ಮಗುವಿಗೂ ಲಾಕ್​ಡೌನ್ ಡ್ಯೂಟಿ!; ಇದು ಮಹಿಳಾ ಪೊಲೀಸರ ಅಸಲಿ ಕತೆ

0

ರಾಜಕೋಟ್ (ಏ. 8): ಕೊರೋನಾ ಸೋಂಕಿತರ ಸಂಖ್ಯೆ ದೇಶಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೊರೋನಾದಿಂದ ಕ್ವಾರಂಟೈನ್​ನಲ್ಲಿರುವವರ ಶುಶ್ರೂಷೆಗೆಂದು ಎಷ್ಟೋ ವೈದ್ಯರು, ನರ್ಸ್​ಗಳು ತಮ್ಮ ಕುಟುಂಬದಿಂದ ದೂರ ಉಳಿದು ಸೇವೆ ಮಾಡುತ್ತಿದ್ದಾರೆ. ಅದೆಷ್ಟೋ ಪೊಲೀಸರು ಹಗಲಿರುಳೆನ್ನದೆ ಜನರ ಸುರಕ್ಷತೆಗಾಗಿ ಕಣ್ಗಾವಲಾಗಿ ನಿಂತಿದ್ದಾರೆ. ಅವರ ಶ್ರಮಕ್ಕೆ ಕಿಂಚಿತ್ ಬೆಲೆಯನ್ನೂ ನೀಡದೆ ಹಲವು ಜನ ಲಾಕ್​ಡೌನ್​ ಉಲ್ಲಂಘಿಸಿ, ರಸ್ತೆಗೆ ಇಳಿಯುತ್ತಿದ್ದಾರೆ. ಅಂಥವರು ಒಮ್ಮೆ ಮನೆಯಲ್ಲಿ ಕುಟುಂಬದವರ ಜೊತೆ ಸುರಕ್ಷಿತವಾಗಿರಬೇಕು ಎಂದುಕೊಂಡರೂ ಕರ್ತವ್ಯದ ಕಾರಣಕ್ಕೆ ಮನೆಯವರಿಂದ ದೂರ ಉಳಿದಿರುವ ಸಾವಿರಾರು ಪೊಲೀಸರು, ಆರೋಗ್ಯ ಸಿಬ್ಬಂದಿಯ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ರಸ್ತೆಗಿಳಿಯುವ ಮುನ್ನ ಯೋಚಿಸಿಯಾರು..

ಆಕೆಯ ಹೆಸರು ಅಲಕಾ ದೇಸಾಯಿ. ಆಕೆ ಬಹಳ ಇಷ್ಟಪಟ್ಟು ಪೊಲೀಸ್ ಇಲಾಖೆಗೆ ಸೇರಿದಾಕೆ. ಗುಜರಾತ್​ನ ಕಚ್​ನಲ್ಲಿ ಪೊಲೀಸ್ ಕಾನ್​ಸ್ಟೇಬಲ್ ಆಗಿರುವ ಆಕೆಯ ಗಂಡ ಕೂಡ ಪೊಲೀಸ್ ಇಲಾಖೆಯಲ್ಲೇ ಕೆಲಸ ಮಾಡುತ್ತಾರೆ. ಆದರೆ, ಅವರಿಬ್ಬರಿಗೂ ಬೇರೆ ಬೇರೆ ಸ್ಟೇಷನ್​ನಲ್ಲಿ ಕೆಲಸ. ಅವರ 14 ತಿಂಗಳ ಹೆಣ್ಣು ಮಗುವನ್ನು ನೋಡಿಕೊಳ್ಳಲು ಈಗ ಮನೆಯಲ್ಲಿ ಯಾರೂ ಇಲ್ಲ. ಮಗುವನ್ನು ನೋಡಿಕೊಳ್ಳುವಾಕೆ ಕೊರೋನಾದಿಂದಾಗಿ ರಜೆ ತೆಗೆದುಕೊಂಡು ತಮ್ಮ ಮನೆ ಸೇರಿಕೊಂಡಿದ್ದಾರೆ.

ಹೀಗಾಗಿ, ಲಾಕ್​ಡೌನ್​ ಹಿನ್ನೆಲೆ ಡ್ಯೂಟಿಯಲ್ಲಿರುವ ಅಲಕಾ ದೇಸಾಯಿಗೆ ಮಗಳನ್ನು ತಮ್ಮ ಜೊತೆಗೇ ಇಟ್ಟುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ. ಅವರ ಮುದ್ದಿನ ಮಗಳು ಜಿಯಾಗೂ ಅಮ್ಮನ ಲಾಠಿಯ ಜೊತೆ ಆಟವಾಡುತ್ತಾ, ಹೊರಗೆಲ್ಲ ಸುತ್ತಾಡಿಕೊಂಡಿರುವುದು ಅಭ್ಯಾಸವಾಗಿದೆ! ಅಮ್ಮನ ಕಂಕುಳನ್ನು ಸೇರಿ ಕುಳಿತುಕೊಳ್ಳುವ ಜಿಯಾ ಕೂಡ ಅಮ್ಮನ ಜೊತೆ ಕೊರೋನಾ ಡ್ಯೂಟಿ ಮಾಡುತ್ತಿದ್ದಾಳೆ.

ಎಳೆಯ ಕಂದಮ್ಮನನ್ನು ಎತ್ತಿಕೊಂಡು ಡ್ಯೂಟಿ ಮಾಡುವ ಅಲಕಾ ದೇಸಾಯಿಯ ಫೋಟೋಗಳು ಫೇಸ್​ಬುಕ್​ನಲ್ಲಿ ವೈರಲ್ ಆಗಿವೆ. ಹಸುಗೂಸನ್ನು ಎತ್ತಿಕೊಂಡು ಡ್ಯೂಟಿ ಮಾಡುತ್ತಿರುವ ಅಲಕಾ ಅವರ ಬದ್ಧತೆಗೆ ಗುಜರಾತ್ ಪೊಲೀಸ್ ಇಲಾಖೆ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದು, ಅಲ್ಲಿನ ಐಜಿಪಿ ಅವರು ಇದೀಗ ಅಲಕಾ ಅವರಿಗೆ ಆಫೀಸಿನಲ್ಲೇ ಕುಳಿತು ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಇದರಿಂದಾಗಿ ಅಲಕಾ ದೇಸಾಯಿ ಅವರಿಗೆ ಕೊಂಚ ನಿರಾಳವಾಗಿದೆ. ಈ ರೀತಿ ಅದೆಷ್ಟೋ ಪೊಲೀಸರು, ವೈದ್ಯರು ಜನರ ಸುರಕ್ಷತೆ ಕಾಯಲು ತಮ್ಮ ಕುಟುಂಬದ ನೆಮ್ಮದಿಯನ್ನು ತ್ಯಾಗ ಮಾಡುತ್ತಿದ್ದಾರೆ. ಅವರ ಶ್ರಮಕ್ಕೆ ನಾವು ಕಿಂಚಿತ್ತಾದರೂ ಗೌರವ ಕೊಡಬೇಕಲ್ಲವೇ?

Leave A Reply

Your email address will not be published.