EBM News Kannada
Leading News Portal in Kannada

’ನಾನು ಎಲ್ಲಿ ಮಲಗಿದ್ದೀನಿ ಎಂದು ಸ್ವತಃ ಡಿ.ಕೆ. ಶಿವಕುಮಾರ್ ಬಂದು ನೋಡಲಿ’; ಸಚಿವ ಈಶ್ವರಪ್ಪ ತಿರುಗೇಟು

0

ಬೆಂಗಳೂರು (ಏಪ್ರಿಲ್ 07); ವಿರೋಧ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಾವು ಕೊರೋನಾ ವಿಚಾರದಲ್ಲಿ ರಾಜಕೀಯ ಮಾಡಲ್ಲ ಅಂತ ಹೇಳಿ ಈಗ ರಾಜಕೀಯ ಮಾಡುತ್ತಿದ್ದಾರೆ. ಬೇಕಿದ್ದರೆ ಸ್ವತಃ ಅವರೇ ಬಂದು ನಾನು ಎಲ್ಲಿ ಮಲಗಿದ್ದೇನೆ ಎಂದು ನೋಡಲಿ ಎಂದು ಸಚಿವ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಇಂದು ದಿಢೀರ್ ಪತ್ರಿಕಾಗೋಷ್ಠಿ ನಡೆಸಿದ್ದ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್, “ರಾಜ್ಯ ಸರ್ಕಾರ ರೈತರ ಸಮ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಪರಿಣಾಮ ರೈತರ ಬೆಳೆಗಳು ಮಣ್ಣು ಪಾಲಾಗುತ್ತಿವೆ. ಇನ್ನೂ ಗ್ರಾಮೀಣ ಜನರ ಸಮಸ್ಯೆಗಳ ಕಡೆಗೆ ಸಚಿವ ಈಶ್ವರಪ್ಪ ಗಮನವಹಿಸುತ್ತಿಲ್ಲ, ಅವರು ಅದೆಲ್ಲಿ ಮಲಗಿದ್ದಾರೋ?” ಎಂದು ಟೀಕಿಸಿದ್ದರು.

ಡಿಕೆಶಿ ಟೀಕೆಗೆ ತಿರುಗೇಟು ನೀಡಿರುವ ಕೆ.ಎಸ್. ಈಶ್ವರಪ್ಪ, “ಇಂದು ಡಿಕೆಶಿ ಸುದ್ದಿಗೋಷ್ಠಿ ಕರೀತಾರೆ ಅನ್ನೋ ಕಲ್ಪನೆ ಸಹ ನನಗೆ ಇರಲಿಲ್ಲ. ವಿರೋಧ ಪಕ್ಷದ ನಾಯಕರಾಗಿ ಡಿಕೆಶಿ ನನಗೇ ಕರೆ ಮಾಡಿ ಕೇಳಬಹುದಿತ್ತು. ಆದರೆ, ಅದನ್ನು ಬಿಟ್ಟು ಅವರು ರಾಜಕೀಯ ಮಾಡುತ್ತಿದ್ದಾರೆ. ಡಿಕೆಶಿ ಪ್ರಸ್ತಾಪ ಮಾಡಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಜನರ ಸಮಸ್ಯೆಗಳಿಗೆ ಸರ್ಕಾರ ಉತ್ತಮವಾಗಿ ಸ್ಪಂದಿಸುತ್ತಿದೆ.

ನಾನೇನು ಸುಮ್ಮನೆ ಕೂತಿಲ್ಲ, ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ನಮ್ಮ ಕೆಲಸ ಮತ್ತು ಕರ್ತವ್ಯವನ್ನು ನಾವು ಮಾಡ್ತಿದ್ದೇವೆ. ನಾನು ಎಲ್ಲಾದ್ರೂ ಮಲಗಿ ಬಂದಿದ್ರೆ ಇಲ್ಯಾಕೆ ಬಂದು ಸುದ್ದಿಗೋಷ್ಟಿ ಮಾಡ್ತಿದ್ದೆ? ಬೇಕಿದ್ದರೆ ನಾನು ಎಲ್ಲಿ ಮಲಗಿದ್ದೇನೆ ಎಂದು ಸ್ವತಃ ಡಿಕೆಶಿ ಅವರೇ ಬಂದು ನೋಡಲಿ” ಎಂದು ಕಿಡಿಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಜನಪ್ರತಿನಿಧಿಗಳ ವೇತನ ಕಡಿತ ವಿಚಾರದ ಬಗ್ಗೆಯೂ ಮಾತನಾಡಿರುವ ಈಶ್ವರಪ್ಪ, “ಕೇಂದ್ರ ಸರ್ಕಾರದಂತೆ ರಾಜ್ಯದಲ್ಲೂ ಜನ ಪ್ರತಿನಿಧಿಗಳ ವೇತನ ಕಡಿತ ಮಾಡಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ. ಸಿಎಂ ಅವರ ಈ ನಿರ್ಧಾರಕ್ಕೆ ನಮ್ಮೆಲ್ಲರ ಬೆಂಬಲ ಇರಲಿದೆ. ನಾನು ಈಗಾಗಲೇ ನನ್ನ ನಾಲ್ಕು ತಿಂಗಳ ವೇತನವನ್ನು ಕೊರೋನಾ ಪರಿಹಾರಕ್ಕಾಗಿ ನೀಡಿದ್ದೇನೆ” ಎಂದು ತಿಳಿಸಿದ್ದಾರೆ.

Leave A Reply

Your email address will not be published.