ಅರಬ್ ನಾಡಲ್ಲಿ ಇಸ್ಲಾಮ್ ನಿಂದನೆಗೆ ಕೈಹಾಕಿ ಕಷ್ಟಕ್ಕೆ ಸಿಕ್ಕಿಕೊಂಡ ಇಬ್ಬರು ಭಾರತೀಯರು
ಅಬುಧಾಬಿ: ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂ ಧರ್ಮವನ್ನು ಅವಮಾನಿಸಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಇಲ್ಲಿಯ ಭಾರತೀಯ ವ್ಯಕ್ತಿಯೊಬ್ಬರಿಗೆ ಎದುರಾಗಿದೆ. ಅಬುಧಾಬಿ ಮೂಲದ ಸಂಸ್ಥೆಯಲ್ಲಿ ಹಣಕಾಸು ವ್ಯವಸ್ಥಾಪಕರಾಗುರುವ ಮಿತೇಶ್ ಈಗ ಸಮಸ್ಯೆಗೆ ಸಿಕ್ಕಿಕೊಂಡಿರುವ ಭಾರತೀಯ. ಇವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಮಿತೇಶ್ ತಮ್ಮ ಫೇಸ್ಬುಕ್ನಲ್ಲಿ ಇಸ್ಲಾಮೋಫೋಬಿಕ್ ರೀತಿಯ ಪೋಸ್ಟ್ ಹಾಕಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಒಬ್ಬ ಜಿಹಾದಿ ಬಾಂಬರ್ 20 ಜನರನ್ನು ಕೊಂದರೆ, ಕೊರೊನಾ ಜಿಹಾದಿ ಉಗುಳುವ ಮೂಲಕ 2 ಸಾವಿರ ಜನರನ್ನ ಕೊಲ್ಲಬಲ್ಲ ಎಂಬರ್ಥ ನೀಡುವ ಗ್ರಾಫಿಕ್ಸ್ ಇರುವ ಪೋಸ್ಟನ್ನು ಇವರು ಫೇಸ್ಬುಕ್ನಲ್ಲಿ ಹಾಕಿದ್ದರು.
ಭಾರತದ ಮುಸ್ಲಿಮ್ ಧರ್ಮಪ್ರಚಾರ ಸಂಘಟನೆಯ ಸದಸ್ಯರು ಉಗುಳುತ್ತಿರುವ ವಿಡಿಯೋ ಎಂದು ಈತ ಬಿಂಬಿಸಲು ಯತ್ನಿಸಿರುವುದು ಈ ಪೋಸ್ಟ್ನಲ್ಲಿ ವೇದ್ಯವಾಗಿದೆ.
ಮಿತೇಶ್ ಅವರ ಈ ಪೋಸ್ಟ್ ಯುಎಇಯ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ್ದು, ಅನೇಕರು ಅವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ನಾಳೆ ಸೂಪರ್ ಪಿಂಕ್ಮೂನ್ ಎಂಬ ಖಗೋಲ ವಿಸ್ಮಯ; ಬೇರೆ ಹುಣ್ಣಿಮೆಗಿಂತ ಇದು ಯಾಕೆ ವಿಭಿನ್ನ?
ಗಲ್ಫ್ ನ್ಯೂಸ್ ಈ ಪೋಸ್ಟ್ ಅನ್ನು ಕಂಪನಿಯ ಗಮನಕ್ಕೆ ತಂದ ಸ್ವಲ್ಪ ಸಮಯದ ನಂತರ, ಕಂಪನಿಯ ಕಾನೂನು ಪ್ರತಿನಿಧಿ ಅವರು ಈ ಬಗ್ಗೆ ತನಿಖೆ ಆರಂಭಿಸಿದ್ದೇವೆ ಎಂದಿದ್ದಾರೆ. ನಾವು ಪ್ರಕರಣವನ್ನು ಪರಿಶೀಲಿಸುತ್ತಿದ್ದೇವೆ. ಯುಎಇ ಕಾನೂನುಗಳಿಗೆ ಅನುಸಾರವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ವಿಷಯದಲ್ಲಿ ಯಾವುದೇ ವಿನಾಯಿತಿ ತೋರುವುದಿಲ್ಲ ಎಂದು ಕಂಪನಿಯ ಕಾನೂನು ಪ್ರತಿನಿಧಿ ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಹೋಗು:ಕಳೆದ ವಾರ ಮತ್ತೊಬ್ಬ ಭಾರತೀಯನ ಇಸ್ಲಾಮೋಫೋಬಿಯಾ ಪ್ರಕರಣ ಬೆಳಕಿಗೆ ಬಂದಿತ್ತು. ಯುಎಇಯಲ್ಲಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಹೊಂದಿರುವ ಎಸ್. ಭಂಡಾರಿ ಅವರ ಬಳಿ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಕೆಲ ಕೇಳಿಕೊಂಡು ಬಯೋಡೇಟಾ ಕಳುಹಿಸಿದ್ದರು. ಆಗ, ನೀನು ಪಾಕಿಸ್ತಾನಕ್ಕೆ ಹೋಗು ಎಂಬ ಉತ್ತರ ಬಂದದ್ದನ್ನು ಕಂಡು ನನಗೆ ಶಾಕ್ ಆಯಿತು ಎಂದು 42 ವರ್ಷದ ಶಂಷಾದ್ ಅಲಂ ಆರೋಪಿಸಿದ್ದರು. ಇವರಿಬ್ಬರ ಸಂಭಾಷಣೆಯ ವಿವರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇಸ್ಲಾಮೋಫೋಬಿಯಾ ಎಂದರೆ ಏನು?
ಇಸ್ಲಾಮ್ ಧರ್ಮ ಮತ್ತು ಮುಸ್ಲಿಮರ ಬಗ್ಗೆ ಅನಗತ್ಯ ಧ್ವೇಷ, ಪೂರ್ವಗ್ರಹ, ಭಯದ ಭಾವನೆ ಹೊಂದಿರುವುದಕ್ಕೆ ಇಸ್ಲಾಮೋಫೋಬಿಯಾ ಎನ್ನುತ್ತಾರೆ. ಭಾರತದಲ್ಲಿ ಇತ್ತೀಚಿಗೆ ಈ ಮನೋಭಾವನೆ ಹೆಚ್ಚಾಗಿ ಬೆಳೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಭಾರತದ ಕೆಲವೆಡೆ ಕೊರೋನಾ ಶಂಕಿತ ಮುಸ್ಲಿಮರು ವೈದ್ಯಕೀಯ ಸಿಬ್ಬಂದಿಯ ಮುಖಕ್ಕೆ ಉಗಿದಿದ್ದರು ಎಂಬ ಸುದ್ದಿ ವೈರಲ್ ಆಗಿತ್ತು. ಮುಸ್ಲಿಮರು ಕೊರೋನಾ ಜಿಹಾದ್ ಮಾಡುತ್ತಿದ್ದಾರೆಂದು ಬಿಂಬಿಸುವ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪೋಸ್ಟ್ಗಳನ್ನು ಹಾಕಲಾಗುತ್ತಿದೆ. ಕೊರೋನಾ ಸೋಂಕು ಹೊಂದಿರುವ ಮುಸ್ಲಿಮರು ಎಲ್ಲೆಂದರಲ್ಲಿ ಸೋಂಕು ಹರಡುತ್ತಿದ್ದಾರೆ. ಎಲ್ಲಾ ಕಡೆ ಎಂಜಲು ಉಗಿಯುತ್ತಿದ್ದಾರೆ. ಅವರ ಹತ್ತಿರ ಹೋಗಬೇಡಿ. ಅವರು ಮಾರುವ ವಸ್ತುಗಳನ್ನು ಖರೀದಿಸಬೇಡಿ ಎಂಬಿತ್ಯಾದಿ ಇಸ್ಲಾಮೋಫೋಬಿಯಾ ನಕಲಿ ಸುದ್ದಿಗಳನ್ನು ಕಿಡಿಗೇಡಿಗಳು ಸೃಷ್ಟಿಸುತ್ತಿದ್ದಾರೆ. ಇಂಥ ನಕಲಿ ಸುದ್ದಿಗಳನ್ನು ಅಮಾಯಕ ಜನರು ಗೊತ್ತಿಲ್ಲದೇ ಶೇರ್ ಮಾಡಿಕೊಳ್ಳುತ್ತಿರುವುದುಂಟು.