ರಾಜ್ಯದಲ್ಲಿಂದು 13 ಮಂದಿಗೆ ಕೊರೋನಾ; ನೂರರ ಗಡಿ ದಾಟಿದ ಸೋಂಕಿತರ ಸಂಖ್ಯೆ
ಬೆಂಗಳೂರು(ಮಾ.31): ಕರ್ನಾಟಕದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದೆ. ಇಂದು ಹೊಸದಾಗಿ 13 ಕೋವಿಡ್-19 ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ. ಈ ಪೈಕಿ ಕಲಬುರಗಿಯ 60 ವರ್ಷದ ಮಹಿಳೆ ಮತ್ತು ಬೆಂಗಳೂರಿನ 40 ವರ್ಷದ ಪುರುಷನಿಗೆ ಸೇರಿದಂತೆ ಇನ್ನೂ ರಾಜ್ಯದ ಹಲವೆಡೆ 11 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿದೆ.
ಇದುವರೆಗೂ ರಾಜ್ಯದಲ್ಲಿ 101 ಪ್ರಕರಣ ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಈ ಪೈಕಿ ಬೆಂಗಳೂರು- 45, ಮೈಸೂರು- 14, ಚಿಕ್ಕಬಳ್ಳಾಪುರ- 9, ದಕ್ಷಿಣ ಕನ್ನಡ- 8, ಉತ್ತರ ಕನ್ನಡ- 8, ಕಲಬುರಗಿ- 4, ದಾವಣಗೆರೆ- 3, ಉಡುಪಿ- 3, ಕೊಡಗು- 1, ಧಾರವಾಡ- 1, ತುಮಕೂರರಿನಲ್ಲಿ ಇಬ್ಬರಿಗೆ ಸೋಂಕು ಬಂದಿದೆ. ಇದರಲ್ಲಿ 8 ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ದೇಶಾದ್ಯಂತ ಇದುವರೆಗೆ ಒಟ್ಟು 1,251 ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಯಲ್ಲಿ 227 ಪ್ರಕರಣಗಳು ಬೆಳಕಿಗೆ ಬಂದಿವೆ. ಇದುವರೆಗೂ ಕೊರೋನಾ ಸೋಂಕಿತರಲ್ಲಿ 101 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಧಿಕ ಸಂಖ್ಯೆಯಲ್ಲಿ ಮಾಸ್ಕ್ ಸಿದ್ದಪಡಿಸಲಾಗುತ್ತಿದೆ. ಲಾಕ್ಡೌನ್ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ವಲಸಿಗರಿಗೆ ಊಟ, ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಅಗತ್ಯ ವಸ್ತುಗಳ ಸಾಗಾಣಿಕೆಗೆ ಅವಕಾಶ ನೀಡಲಾಗಿದೆ. ಹಲವು ರಾಜ್ಯಗಳಲ್ಲಿರುವ 23 ಲಕ್ಷ ವಲಸಿಗರಿಗೆ ಊಟ ಕಲ್ಪಿಸಲಾಗಿದೆ. 21 ಸಾವಿರ ಪುನರ್ವಸತಿ ಕೇಂದ್ರ ಆರಂಭಿಸಲಾಗಿದೆ. ಇದುವರೆಗೆ 42,788 ಲ್ಯಾಬ್ ಪರೀಕ್ಷೆ ನಡೆಸಲಾಗಿದೆ. ದೇಶಾದ್ಯಂತ 123 ಲ್ಯಾಬ್ ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.
ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಆದರೆ ಕೆಲವು ನಗರ ಪ್ರದೇಶಗಳಲ್ಲಿನ ಜನತೆ ಕರ್ಫ್ಯೂ ಧಿಕ್ಕರಿಸಿ ರಸ್ತೆಗಳಲ್ಲಿ ಓಡಾಡುವುದು ಮಾಡುತ್ತಿದ್ದಾರೆ. ಎಲ್ಲರೂ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಬೆಲೆ ಕೊಡಿ ಮತ್ತು ಲಾಕ್‍ಡೌನ್ ಪಾಲಿಸಬೇಕು. ಪೊಲೀಸರು ಕೂಡ ನಿಮ್ಮ ಹಿತವನ್ನೇ ಬಯಸುವವರು. ಅವರೇನು ನಿಮ್ಮ ವೈರಿಗಳಲ್ಲ. ಪೊಲೀಸರಿಗೆ ಅನಿವಾರ್ಯತೆಯನ್ನು ಸೃಷ್ಟಿಸಬೇಡಿ. ಇನ್ನೂ 16 ದಿನಗಳು ನಿಮ್ಮ ಮನೆಯಲ್ಲಿಯೇ ಇರಬೇಕು ಸರ್ಕಾರ ಹೇಳಿದೆ.