ಕೋರ್ಟ್ ಕಟಕಟೆಯಲ್ಲಿ ಎಂ.ಎನ್. ಕುಮಾರ್ ವಿರುದ್ಧ ಹೇಳಿಕೆ ನೀಡಿದ ಸುದೀಪ್; ಫಲ ನೀಡಲಿಲ್ಲ ಸಂಧಾನ – Kannada News | Kichcha Sudeep records his statement in Bengaluru magistrate court against MN Kumar
ಕಿಚ್ಚ ಸುದೀಪ್ ಅವರು ಇಂದು (ಆಗಸ್ಟ್ 10) ಕೋರ್ಟ್‌ನಲ್ಲಿ ಪ್ರಮಾಣಿತ ಹೇಳಿಕೆ ದಾಖಲಿಸಿದ್ದಾರೆ. ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಎಂ.ಎನ್. ಕುಮಾರ್ ಮಾಡಿದ ಆರೋಪಗಳೆಲ್ಲವೂ ಸುಳ್ಳು ಎಂದು ಸುದೀಪ್ ಹೇಳಿದ್ದಾರೆ. ಇಬ್ಬರ ನಡುವೆ ಸಂಧಾನ ಮಾಡಿಸಲು ಚಿತ್ರರಂಗದ ಹಿರಿಯರು ಮಾಡಿದ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ.

ಕಿಚ್ಚ ಸುದೀಪ್, ಎಂ.ಎನ್. ಕುಮಾರ್
ನಟ ಕಿಚ್ಚ ಸುದೀಪ್ (Kichcha Sudeep) ಮತ್ತು ನಿರ್ಮಾಪಕ ಎಂ.ಎನ್. ಕುಮಾರ್ (MN Kumar) ನಡುವೆ ಭುಗಿಲೆದ್ದಿರುವ ವಿವಾದವನ್ನು ಬಗೆಹರಿಸಲು ಸಂಧಾನ ಸಭೆ ನಡೆದಿತ್ತು. ಹಿರಿಯ ನಟರಾದ ಶಿವರಾಜ್ಕುಮಾರ್, ರವಿಚಂದ್ರನ್ ಮುಂತಾದವರ ಮಧ್ಯಸ್ಥಿಕೆಯಲ್ಲಿ ಸಂಧಾನ ಮಾಡಿಸಲು ಪ್ರಯತ್ನಿಸಲಾಗಿತ್ತು. ಆದರೆ ಅದಕ್ಕೆ ಕಿಚ್ಚ ಸುದೀಪ್ ಒಪ್ಪಿಕೊಂಡಿರಲಿಲ್ಲ. ಈಗ ಅವರು ನ್ಯಾಯಾಲಯದಲ್ಲಿ ನಿರ್ಮಾಪಕರಾದ ಎಂ.ಎನ್. ಕುಮಾರ್ ಮತ್ತು ಎಂ.ಎನ್. ಸುರೇಶ್ ವಿರುದ್ಧ ಹೇಳಿಕೆ ದಾಖಲು ಮಾಡಿದ್ದಾರೆ. ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ (Magistrate Court) ಸುದೀಪ್ ಅವರು ಹಾಜರಾಗಿದ್ದಾರೆ. ಕಟಕಟೆಯಲ್ಲಿ ನಿಂತು ಅವರು ತಮ್ಮ ಹೇಳಿಕೆ ನೀಡಿದ್ದಾರೆ. ಸಂಧಾನ ಸಭೆ ಬದಲು ನ್ಯಾಯಾಲಯದ ಮೂಲಕವೇ ಇತ್ಯರ್ಥ ಮಾಡಿಕೊಳ್ಳಲು ಅವರು ಮುಂದಾಗಿದ್ದಾರೆ.
ಕಿಚ್ಚ ಸುದೀಪ್ ಅವರು ಇಂದು (ಆಗಸ್ಟ್ 10) ಕೋರ್ಟ್‌ನಲ್ಲಿ ಪ್ರಮಾಣಿತ ಹೇಳಿಕೆ ದಾಖಲಿಸಿದ್ದಾರೆ. ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಎಂ.ಎನ್. ಕುಮಾರ್ ಮಾಡಿದ ಆರೋಪಗಳೆಲ್ಲವೂ ಸುಳ್ಳು ಎಂದು ಸುದೀಪ್ ಹೇಳಿದ್ದಾರೆ. ‘ಆರ್.ಆರ್. ನಗರದಲ್ಲಿ ಮನೆ ಕಟ್ಟಲು ಹಣದ ನೆರವು ಪಡೆದಿರುವ ಬಗ್ಗೆ ಮಾಡಲಾಗಿರುವ ಆರೋಪ ಸುಳ್ಳು. ಎಂ.ಎನ್. ಕುಮಾರ್ ಹೇಳಿಕೆಯನ್ನು ಎಂ.ಎನ್. ಸುರೇಶ್ ಬೆಂಬಲಿಸಿದ್ದಾರೆ. ಇಬ್ಬರು ನಿರ್ಮಾಪಕರ ಸುದ್ದಿಗೋಷ್ಠಿಯಿಂದ ನನಗೆ ಮಾನಹಾನಿ ಆಗಿದೆ. ಹಲವರು ನನ್ನನ್ನು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ’ ಎಂದು ಸುದೀಪ್ ಹೇಳಿದ್ದಾರೆ.
ವಕೀಲ ಅಜಯ್ ಕಡಕೋಳ್ ಜೊತೆ ಸುದೀಪ್ ಅವರು ಕೋರ್ಟ್ಗೆ ಹಾಜರಾದರು. ಅವರೊಂದಿಗೆ ಚಕ್ರವರ್ತಿ ಚಂದ್ರಚೂಡ್ ಮತ್ತು ನಿರ್ಮಾಪಕ ಜಾಕ್ ಮಂಜು ಕೂಡ ಆಗಮಿಸಿದರು. ತಮ್ಮ ಬಗ್ಗೆ ಅಪಪ್ರಚಾರ ಮಾಡಿದ ನಿರ್ಮಾಪಕರ ವಿರುದ್ಧ ಸುದೀಪ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದು, ಆ ಕೇಸ್ಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ ಆಗಿದೆ. ಫೋಟೋ ಸಹಿತ ಹಲವು ದಾಖಲೆಗಳನ್ನು ಸುದೀಪ್ ಅವರು ಕೋರ್ಟ್ಗೆ ಸಲ್ಲಿಸಿದ್ದಾರೆ.
ಒಂದು ವೇಳೆ ನಿರ್ಮಾಪಕರು ಕ್ಷಮೆ ಕೇಳಿದರೆ ರಾಜಿ ಸಂಧಾನ ಮಾಡಿಕೊಳ್ಳುತ್ತೀರಾ ಎಂದು ಸುದೀಪ್ಗೆ ನ್ಯಾಯಾಧೀಶರು ಕೇಳಿದರು. ಅದಕ್ಕೆ ಸುದೀಪ್ ಒಪ್ಪಿಕೊಂಡಿಲ್ಲ. ‘ಈ ಮೊದಲು ನೋಟೀಸ್ ನೀಡಿ ಮಾಧ್ಯಮಗಳಲ್ಲಿ ಕ್ಷಮೆಯಾಚಿಸಲು ಕೇಳಿದ್ದೆ. ಆದರೆ ಅವರು ಮಾಧ್ಯಮಗಳಲ್ಲಿ ಕ್ಷಮೆ ಯಾಚಿಸಿಲ್ಲ. ಅವರ ಹೇಳಿಕೆಯಿಂದ ನಾನು ಇಷ್ಟು ವರ್ಷ ಕಷ್ಟಪಟ್ಟು ಗಳಿಸಿದ ವರ್ಚಸ್ಸಿಗೆ ಹಾನಿಯಾಗಿದೆ. ಒಬ್ಬ ಸುದೀಪ್ನನ್ನು ಬಗ್ಗಿಸಿದರೆ ಹಲವರನ್ನು ಬಗ್ಗಿಸಬಹುದೆಂದು ತಿಳಿದಿದ್ದಾರೆ’ ಎಂದು ಹೇಳುವ ಮೂಲಕ ರಾಜಿಗೆ ತಾವು ಸಿದ್ಧರಿಲ್ಲ ಎಂದು ನ್ಯಾಯಾಧೀಶರ ಎದುರು ಸುದೀಪ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 5:22 pm, Thu, 10 August 23