ವಿದೇಶಿ ಉಡುಗೊರೆ ಹಗರಣ: ಫೇಸ್ ಬುಕ್ ಸ್ನೇಹಿತರಿಂದ ಬೆಂಗಳೂರಿನ ವ್ಯಕ್ತಿಗೆ 5 ಲಕ್ಷ ರೂ ವಂಚನೆ – Kannada News | Bengaluru man duped of Rs 5 lakh by Facebook friends in foreign gift scam
ವಿದೇಶದಿಂದ ಉಡುಗೊರೆಗಳನ್ನು ಕಳುಹಿಸುವುದಾಗಿ ಯಾಮಾರಿಸಿ ವ್ಯಕ್ತಿಯೋರ್ವನಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿರುವಂತಹ ಘಟನೆ ಬೆಳಕಿಗೆ ಬಂದಿದೆ. ಸದ್ಯ ಪೀಣ್ಯ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 (ಯು/ಎಸ್-66(ಸಿ), 66(ಡಿ)) ಐಪಿಸಿ 1860 (ಯು/ಎಸ್-420) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಾತಿನಿಧಿಕ ಚಿತ್ರ
ಬೆಂಗಳೂರು, ಆಗಸ್ಟ್ 10: ವಿದೇಶದಿಂದ ಉಡುಗೊರೆ (foreign gift) ಗಳನ್ನು ಕಳುಹಿಸುವುದಾಗಿ ಯಾಮಾರಿಸಿ ವ್ಯಕ್ತಿಯೋರ್ವನಿಂದ 5 ಲಕ್ಷ ರೂಪಾಯಿ ಪಡೆದು ವಂಚಿಸಿರುವಂತಹ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಪೀಣ್ಯ ನಿವಾಸಿ ಆಗಿರುವ ಪ್ಯಾಟ್ರಿಕ್ ರೋಹನ್ ಎಂಬುವವರು ವಂಚನೆಗೊಳಗಾದ ವ್ಯಕ್ತಿ. ಫೇಸ್ ಬುಕ್ನಲ್ಲಿ ನಾಲ್ವರು ಅಪರಿಚಿತರ ಸ್ನೇಹ ಬೆಳೆಸಿ ಇದೀಗ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 (ಯು/ಎಸ್-66(ಸಿ), 66(ಡಿ)) ಐಪಿಸಿ 1860 (ಯು/ಎಸ್-420) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ರೋಹನ್ಗೆ ಫೇಸ್ ಬುಕ್ನಲ್ಲಿ ಮಿಸ್ ಝಾ ಎಂಬ ಅಪರಿಚಿತ ವ್ಯಕ್ತಿಯ ಗೆಳೆತನವಿತ್ತು. ಆಕೆ ಲಂಡನ್‌ನಲ್ಲಿ ಡಿಸೈನರ್ ಆಗಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಳು. ಇತ್ತ ರೋಹನ್ ನಂಬುತ್ತಿದ್ದಂತೆ ಮಿಸ್ ಝಾ ತನ್ನ ಇತರೆ ಸ್ನೇಹಿತರಾದ ಪ್ರಿಯಾಂಕ್ ಸಕ್ಸೇನಾ, ಗೌತಮ್ ಸೇನ್ ಮತ್ತು ರೋಹಿತ್ ಜೈನ್ ಎನ್ನುವವರನ್ನು ಪರಿಚಯಿಸಿದ್ದು, ನಾವು ಸ್ನೇಹಿತರೆಂದು ಹೇಳಿಕೊಂಡಿದ್ದಾರೆ.
ಶರ್ಟ್, ಬೂಟ್ ಮತ್ತು ಉಂಗುರಗಳಂತಹ ಉಡುಗೊರೆಗಳನ್ನು ಕಳುಹಿಸುತ್ತಿರುವುದಾಗಿ ಹೇಳಿದ್ದು, ಅದಕ್ಕೆ ಕಸ್ಟಮ್ಸ್‌ನಲ್ಲಿ ಪಾವತಿಸಲು ಪ್ರಿಯಾಂಕ್ ಸಕ್ಸೇನಾಗೆ ಹಣ ಕಳುಹಿಸುವಂತೆ ಮಿಸ್ ಝಾ ರೋಹನ್ಗೆ ಹೇಳಿದ್ದಾಳೆ. ಇತ್ತ ರೋಹನ್ ಹಣವನ್ನು ವರ್ಗಾಯಿಸುತ್ತಿದ್ದಂತೆ ಆರೋಪಿಗಳು ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Published On – 6:00 pm, Thu, 10 August 23