ಆಕ್ಸಿಡೆಂಟ್: ನಟಿ ಶರ್ಮಿಳಾ ಮಾಂಡ್ರೆ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು
ಬೆಂಗಳೂರು, ಏಪ್ರಿಲ್ 04: ಕನ್ನಡ ಚಲನಚಿತ್ರ ನಟಿ ಶರ್ಮಿಳಾ ಮಾಂಡ್ರೆ ವಿರುದ್ಧ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಲಾಕ್ ಡೌನ್ ನಿಯಮವನ್ನು ಉಲ್ಲಂಘಿಸಿ, ವಾಹನ ಚಾಲನೆ ಮಾಡಿ, ಅಪಘಾತಕ್ಕೀಡಾಗಿರುವ ಶರ್ಮಿಳಾ ಮಾಂಡ್ರೆ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಘಟನೆಯ ಹಿನ್ನಲೆ: ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಂಗಳೂರಿನ ವಸಂತನಗರದ ರೈಲ್ವೇ ಅಂಡರ್ ಪಾಸ್ ನಲ್ಲಿ ಜಾಗ್ವಾರ್ ಕಾರು ಅಪಘಾತಕ್ಕೀಡಾಗಿದೆ. ಆ ಕಾರಿನಲ್ಲಿ ನಟಿ ಶರ್ಮಿಳಾ ಮಾಂಡ್ರೆ ಮತ್ತು ಲೋಕೇಶ್ ಪ್ರಯಾಣ ಮಾಡುತ್ತಿದ್ದರು.
ಪಿಲ್ಲರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ಕಾರು ಜಖಂಗೊಂಡಿದೆ. ಅಪಘಾತದಿಂದ ಲೋಕೇಶ್ ಕೈಗೆ ಪೆಟ್ಟಾಗಿದ್ದು, ಶರ್ಮಿಳಾ ಮಾಂಡ್ರೆ ಕತ್ತು ಮತ್ತು ಮುಖಕ್ಕೆ ಏಟಾಗಿದೆ ಎನ್ನಲಾಗಿದೆ. ಸದ್ಯ ಇವರಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.