EBM News Kannada
Leading News Portal in Kannada

ಓಲಾಗೆ 4,898 ಕೋಟಿ ರೂ. ನಷ್ಟ

0

ಹೊಸದಿಲ್ಲಿ : ಬೆಂಗಳೂರು ಮೂಲದ, ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆ ಒದಗಿಸುವ ಓಲಾ ಕಂಪನಿಗೆ 2016-17ರ ಅವಧಿಯಲ್ಲಿ 4,898 ಕೋಟಿ ರೂ. ನಷ್ಟವಾಗಿದೆ. ಕಂಪನಿಗೆ ಇದೇ ಅವಧಿಯಲ್ಲಿ ಆದಾಯವು ಶೇ.70ರಷ್ಟು ವೃದ್ಧಿಸಿದ್ದರೂ, ನಷ್ಟವನ್ನು ತಪ್ಪಿಸಲು ಸಾಧ್ಯವಾಗಿಲ್ಲ.

ಭಾರತೀಯ ಮಾರುಕಟ್ಟೆಯಲ್ಲಿ ಅಮೆರಿಕದ ಎದುರಾಳಿ ಉಬರ್‌ ಪ್ರವೇಶದ ನಂತರ ಓಲಾಗೆ ತೀವ್ರ ಪೈಪೋಟಿ ಎದುರಾಗಿತ್ತು. 2015-16ರಲ್ಲಿ ಓಲಾ 3,148 ಕೋಟಿ ರೂ. ನಷ್ಟ ದಾಖಲಿಸಿತ್ತು.

ಓಲಾವನ್ನು ನಿರ್ವಹಿಸುತ್ತಿರುವ ಎಎನ್‌ಐ ಟೆಕ್ನಾಲಜೀಸ್‌, 2016-17ರ ಅವಧಿಯಲ್ಲಿ ತನ್ನ ಒಟ್ಟಾರೆ ಆದಾಯವನ್ನು ಶೇ.70ರಷ್ಟು ಹೆಚ್ಚಿಸಿಕೊಂಡಿದ್ದು, 1380 ಕೋಟಿ ರೂ.ಗೆ ಏರಿಕೆಯಾಗಿತ್ತು. 2015-16ರಲ್ಲಿ ಕಂಪನಿ 810 ಕೋಟಿ ರೂ. ಆದಾಯ ಗಳಿಸಿತ್ತು. ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌ಗೆ ಕಂಪನಿ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ. ಓಲಾಗೆ ತನ್ನ ಸಿಬ್ಬಂದಿ ವೆಚ್ಚದಲ್ಲೂ 24 ಪರ್ಸೆಂಟ್‌ ಹೆಚ್ಚಳವಾಗಿದ್ದು, 572 ಕೋಟಿ ರೂ.ಗೆ ವೃದ್ಧಿಸಿದೆ. ಹಣಕಾಸು ವೆಚ್ಚ 28 ಕೋಟಿ ರೂ.ಗೆ ಏರಿದೆ.

2011ರಲ್ಲಿ ಭವೀಶ್‌ ಅಗರವಾಲ್‌ ಹಾಗೂ ಅಂಕಿತ್‌ ಭಾಟಿ ಅವರು ಓಲಾವನ್ನು ಸ್ಥಾಪಿಸಿದ್ದರು. 110 ನಗರಗಳಲ್ಲಿ ಓಲಾ ಸೇವೆ ಒದಗಿಸುತ್ತಿದೆ. 10 ಲಕ್ಷಕ್ಕೂ ಅಧಿಕ ಕ್ಯಾಬ್ಸ್‌ ಹಾಗೂ ಆಟೊ ರಿಕ್ಷಾ ಚಾಲಕ ಪಾಲುದಾರರ ಜಾಲವಿದೆ.

ಓಲಾ ಕ್ಯಾಬ್‌ ಸೇವೆ ಮಾತ್ರವಲ್ಲದೆ, ಇನ್ನೂ ಕೆಲವು ಭಿನ್ನ ಸೇವೆಗಳನ್ನು ಒದಗಿಸುತ್ತಿದೆ. ಇದಕ್ಕಾಗಿ ಓಲಾ ಫ್ಲೀಟ್‌ ಟೆಕ್ನಾಲಜೀಸ್‌ (ಲೀಸಿಂಗ್‌ ಬಿಸಿನೆಸ್‌), ಜಿಪ್‌ಕ್ಯಾಶ್‌ ಕಾರ್ಡ್‌ ಸವೀರ್‍ಸ್‌ (ಪೇಮೆಂಟ್‌) ಎಂಬ ಅಧೀನ ಕಂಪನಿಗಳನ್ನು ಒಳಗೊಂಡಿದೆ.

Leave A Reply

Your email address will not be published.