EBM News Kannada
Leading News Portal in Kannada

ಗೃಹ ಸಾಲ ಬಡ್ಡಿ ಸಬ್ಸಿಡಿ: ಕೇಂದ್ರದಿಂದ ಶುಭ ಸುದ್ದಿ

0

ಹೊಸದಿಲ್ಲಿ : ಮಧ್ಯಮ ವರ್ಗದ ಜನತೆಗೆ ಸ್ವಂತ ಸೂರು ಹೊಂದಲು ಅನುಕೂಲವಾಗುವಂತೆ ಕೇಂದ್ರ ಸರಕಾರ, ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ನಗರ) ಅಡಿಯಲ್ಲಿ ಬಡ್ಡಿ ಸಬ್ಸಿಡಿ ಪಡೆಯಲು ಅರ್ಹತೆ ಪಡೆಯುವ ಫ್ಲ್ಯಾಟ್‌ಗಳ ಕಾರ್ಪೆಟ್‌ ಏರಿಯಾದ ಮಿತಿಯನ್ನು ಶೇ.33ರಷ್ಟು ಹೆಚ್ಚಿಸಿದೆ.

ಮಧ್ಯಮ-ಆದಾಯ ವರ್ಗದ (ಎಂಐಜಿ- ಐ ) ಗುಂಪಿನ ಜನತೆಗೆ ಕ್ರೆಡಿಟ್‌ ಲಿಂಕ್ಡ್‌ ಸಬ್ಸಿಡಿ ಸ್ಕೀಮ್‌ (ಸಿಎಲ್‌ಎಸ್‌ಎಸ್‌) ಯೋಜನೆಯನ್ವಯ ಬಡ್ಡಿ ಸಬ್ಸಿಡಿ ಪಡೆಯಲು ಅರ್ಹ ಫ್ಲ್ಯಾಟ್‌ಗಳ ಕಾರ್ಪೆಟ್‌ ಏರಿಯಾದ ಮಿತಿಯನ್ನು 120 ಚದರ ಮೀಟರ್‌ನಿಂದ 160 ಚದರ ಮೀಟರ್‌ ಅಥವಾ 1,722 ಚದರ ಅಡಿಗೆ ವಿಸ್ತರಿಸಲಾಗಿದೆ. ಹಾಗೂ ಎಂಐಜಿ- ಐಐ ವರ್ಗದಲ್ಲಿ 150 ಚದರ ಮೀಟರ್‌ನಿಂದ 200 ಚದರ ಮೀಟರ್‌ ಅಥವಾ 2,153 ಚದರ ಅಡಿಗೆ ವಿಸ್ತರಿಸಲಾಗಿದೆ.

ಈ ಹಿಂದೆ (ಎಂಐಜಿ- ಐ ) ಕ್ಕೆ 120 ಚದರ ಮೀಟರ್‌ ಅಥವಾ 1,291 ಚದರ ಅಡಿ ಮತ್ತು ಎಂಐಜಿ ಐಐ ವರ್ಗದಲ್ಲಿ 150 ಚದರ ಮೀಟರ್‌ ಅಥವಾ 1,614 ಚದರ ಅಡಿಗೆ ನಿಗದಿಯಾಗಿತ್ತು. ಇದೀಗ ಮಿತಿ ವಿಸ್ತರಣೆಯ ಪರಿಣಾಮ ನಿರ್ಮಾಣ ವಲಯಕ್ಕೆ ಭಾರಿ ಉತ್ತೇಜನ ಸಿಗುವ ನಿರೀಕ್ಷೆ ಇದೆ. ಆರ್ಥಿಕ ಚಟುವಟಿಕೆ ವೃದ್ಧಿಸುವ ಸಾಧ್ಯತೆ ಇದೆ ಎಂದು ರಿಯಾಲ್ಟಿ ವಲಯದ ಪ್ರಾತಿನಿಧಿಕ ಸಂಸ್ಥೆ ಕ್ರೆಡಾಯ್‌ನ ಅಧ್ಯಕ್ಷ ಜಕ್ಸೆ ಶಾ ಹೇಳಿದ್ದಾರೆ.

ಮಧ್ಯಮ ವರ್ಗದ ಜನತೆಗೆ ಪ್ರಯೋಜನ:

ವಾರ್ಷಿಕ 6ರಿಂದ 12 ಲಕ್ಷ ರೂ. ಆದಾಯ ಇರುವ ಕುಟುಂಬಗಳು ಎಂಐಜಿ- ಐ ಹಾಗೂ 12ರಿಂದ 18 ಲಕ್ಷ ರೂ. ಆದಾಯ ಇರುವ ಕುಟುಂಬಗಳು ಎಂಐಜಿ-ಐಐ ವರ್ಗದ ವ್ಯಾಪ್ತಿಗೆ ಬರುತ್ತವೆ. ಎಂಐಜಿ- ಐ ರಲ್ಲಿ 9 ಲಕ್ಷ ರೂ. ತನಕದ ಗೃಹ ಸಾಲಕ್ಕೆ ಶೇ.4ರಷ್ಟು ಬಡ್ಡಿ ಸಬ್ಸಿಡಿ ಸಿಗುತ್ತದೆ. ಈ ಸಬ್ಸಿಡಿ ಪಡೆಯಲು ಮುಂಗಡವಾಗಿ ಪಾವತಿಸಬೇಕಾಗುವ ಹಣ 2,35,068 ರೂ.ಗಳಾಗಿದೆ. ಎಂಐಜಿ-ಐಐ ವರ್ಗಕ್ಕೆ 12 ಲಕ್ಷ ರೂ. ತನಕದ ಸಾಲಕ್ಕೆ ಬಡ್ಡಿ ಸಬ್ಸಿಡಿ ಶೇ.3 ಆಗಿದೆ. ಈ ಸಬ್ಸಿಡಿ ಪಡೆಯಲು ಮುಂಗಡವಾಗಿ ಪಾವತಿಸಬೇಕಾದ ಹಣ 2,30,156 ರೂ.ಗಳಾಗಿದೆ.

”ಆರ್‌ಬಿಐ ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಅಡಿಯಲ್ಲಿ (ಪಿಎಂಎವೈ) ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಗೃಹ ಸಾಲ ವಿತರಣೆಗೆ ಗೃಹ ಸಾಲದ ಮಿತಿಯನ್ನು ಮೆಟ್ರೊ ನಗರಗಳಲ್ಲಿ 35 ಲಕ್ಷ ರೂ.ಗೆ ವೃದ್ಧಿಸಿದೆ. ಇದು ಸ್ವಾಗತಾರ್ಹ ನಿರ್ಧಾರವಾಗಿದ್ದು, ಇದಕ್ಕೆ ಪೂರಕವಾಗಿ ಬಡ್ಡಿ ಸಬ್ಸಿಡಿಗೆ ಅರ್ಹತೆಯಲ್ಲಿ ಫ್ಲ್ಯಾಟ್‌ನ ಕಾರ್ಪೆಟ್‌ ಏರಿಯಾದ ಮಿತಿಯನ್ನೂ ವಿಸ್ತರಿಸಲಾಗಿದೆ. ರಿಯಾಲ್ಟಿ ಚಟುವಟಿಕೆಗಳ ಪ್ರಗತಿಗೆ ಇದು ನೆರವಾಗುವ ನಿರೀಕ್ಷೆ ಇದೆ ಎಂದು ರಿಯಲ್‌ ಎಸ್ಟೇಟ್‌ ಉದ್ಯಮಿ ರಾಕೇಶ್‌ ರೆಡ್ಡಿ ಹೇಳಿದ್ದಾರೆ. ಪರಿಷ್ಕೃತ ನಿಯಮಗಳು 2017ರ ಜನವರಿ 1ರಿಂದ ಅನ್ವಯವಾಗುತ್ತವೆ. ಕ್ರೆಡಿಟ್‌ ಲಿಂಕ್ಡ್‌ ಸಬ್ಸಿಡಿ ಸ್ಕೀಮ್‌ನಲ್ಲಿ ಪ್ರತಿಯೊಬ್ಬ ಫಲಾನುಭವಿ 2.35 ಲಕ್ಷ ರೂ. ತನಕ ಸಬ್ಸಿಡಿ ಪಡೆಯಲು ಸಾಧ್ಯವಿದೆ.

Leave A Reply

Your email address will not be published.