ಹೆಚ್ಡಿಎಫ್ಸಿ ಬ್ಯಾಂಕ್ನ 1.75 ಕೋಟಿ ಷೇರು ಖರೀದಿಸಿದ ಚೀನಾ
ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಭಾರತದ ಅಗ್ರಗಣ್ಯ ಖಾಸಗಿ ಬ್ಯಾಂಕ್ಗಳಲ್ಲೊಂದೆನಿಸಿದ ಹೆಚ್ಡಿಎಫ್ಸಿಯಲ್ಲಿ ಚೀನಾದ ಪೀಪಲ್ಸ್ ಬ್ಯಾಂಕ್ ತನ್ನ ಹೂಡಿಕೆ ಹೆಚ್ಚಿಸಿದೆ. ಪೀಪಲ್ಸ್ ಬ್ಯಾಂಕ್ ಆಫ್ ಚೀನಾ(ಪಿಬಿಒಸಿ) ಹೆಚ್ಡಿಎಫ್ಸಿಯ 1.75 ಕೋಟಿ ಷೇರುಗಳನ್ನ ಖರೀದಿಸಿದೆ. ಇದರೊಂದಿಗೆ ಹೆಚ್ಡಿಎಫ್ಸಿಯಲ್ಲಿ ಶೇ. 0.80ಯಷ್ಟಿದ್ದ ತನ್ನ ಪಾಲನ್ನು ಶೇ. 1.1ಕ್ಕೆ ಹೆಚ್ಚಿಸಿಕೊಂಡಿದೆ. ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇಡೀ ವಿಶ್ವವೇ ಪರದಾಡುತ್ತಿರುವಾಗ ಚೀನಾದ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತಿರುವುದು ಗಮನಾರ್ಹ.
ಹೆಚ್ಡಿಎಫ್ಸಿ ಸಂಸ್ಥೆ ಸೆನ್ಸೆಕ್ಸ್ಗೆ ಬಿಡುಗಡೆ ಮಾಡಿದ ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕ ವರದಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಭಾರತದ ಇತರ ಕೆಲ ಬ್ಯಾಂಕ್ಗಳಂತೆ ಹೆಚ್ಡಿಎಫ್ಸಿ ಕೂಡ ಸಂಕಷ್ಟಕ್ಕೆ ಸಿಲುಕಿದೆ. ಕೊರೋನಾ ವೈರಸ್ ಬಿಕ್ಕಟ್ಟಿನಿಂದಾಗಿ ಷೇರುಮಾರುಕಟ್ಟೆ ಪ್ರಪಾತಕ್ಕೆ ಕುಸಿದಾಗ ಹೆಚ್ಡಿಎಫ್ಸಿಯ ಷೇರುಗಳೂ ಕೂಡ ಶೇ. 25ರಷ್ಟು ನಷ್ಟ ಮಾಡಿಕೊಂಡಿದ್ದವು. ಬಿಎಸ್ಇ ಸೆನ್ಸೆಕ್ಸ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಷೇರುಗಳಲ್ಲಿ ಹೆಚ್ಡಿಎಫ್ಸಿಯೂ ಒಂದು.
ಇದನ್ನೂ ಓದಿ: ಸೋಂಕು ನಿವಾರಕ ಟನಲ್ಗಳಿಂದಲೇ ಸಮಸ್ಯೆ; ಯಡವಟ್ಟಾಯ್ತು ಸರ್ಕಾರದ ಹೊಸ ಪ್ರಯತ್ನ
ಈ ಸಂದರ್ಭದಲ್ಲೇ ಚೀನಾದ ಬ್ಯಾಂಕು ಹೆಚ್ಡಿಎಫ್ಸಿಯ ಮೇಲೆ ಹೂಡಿಕೆ ಹೆಚ್ಚಿಸಿದೆ. ಆದರೆ, ನಿಯಮಾವಳಿ ಪ್ರಕಾರ ಚೀನಾ ಬ್ಯಾಂಕು ಶೇ. 1ಕ್ಕಿಂತ ಹೆಚ್ಚು ಷೇರುಗಳನ್ನ ಹೊಂದುವಂತಿಲ್ಲ. ಈ ನಿಯಮ ಮೀರಿ ಶೇ. 1.1ರಷ್ಟು ಷೇರು ಹೊಂದಿದೆ. 2019ರ ಮಾರ್ಚ್ನಲ್ಲಿ ಹೆಚ್ಡಿಎಫ್ಸಿಯಲ್ಲಿ ಚೀನಾ ಬ್ಯಾಂಕು ಶೇ. 0.8 ಪಾಲು ಹೊಂದಿತ್ತು. ಹಂತ ಹಂತವಾಗಿ ಅದು ಷೇರುಗಳನ್ನ ಖರೀಸುತ್ತಾ ಬಂದಿದೆ ಎಂದು ಹೆಚ್ಡಿಎಫ್ಸಿ ಉಪಾಧ್ಯಕ್ಷ ಮತ್ತು ಸಿಇಒ ಕೇಕಿ ಮಿಸ್ತ್ರಿ ಹೇಳಿದ್ದಾರೆ.
ಹೆಚ್ಡಿಎಫ್ಸಿಯಲ್ಲಿ ಹೂಡಿಕೆ ಮಾಡಲು ಹಲವು ಪ್ರಬಲ ಸಂಸ್ಥೆಗಳು ಆಸಕ್ತಿ ಹೊಂದಿವೆ. ಸರ್ಕಾರಿ ಸ್ವಾಮ್ಯದ ಎಲ್ಐಸಿ ಸಂಸ್ಥೆ ಕ್ಯಾಲೆಂಡರ್ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಹೆಚ್ಡಿಎಫ್ಸಿಯಲ್ಲಿ ಹೂಡಿಕೆ ಮಾಡಿತ್ತು. ಶೇ. 4.21ರಷ್ಟಿದ್ದ ತನ್ನ ಪಾಲನ್ನು ಶೇ. 4.67ಕ್ಕೆ ಹೆಚ್ಚಿಸಿತ್ತು.