ಇಸ್ಲಾಮಾಬಾದ್ : ಎಲ್ಲಾ ಸರ್ಕಾರಿ ನೌಕರರೂ ಅನುಮತಿಯಿಲ್ಲದೆ ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ನಿಷೇಧಿಸಿ ಪಾಕಿಸ್ತಾನ ಸರಕಾರ ಆದೇಶ ಜಾರಿಗೊಳಿಸಿದೆ. ಸರಕಾರದ ಮಾಹಿತಿ ಹಾಗೂ ದಾಖಲೆಗಳ ಬಹಿರಂಗಪಡಿಸುವಿಕೆಯನ್ನು ನಿಲ್ಲಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ನ್ಯೂಸ್ ಇಂಟರ್‍ನ್ಯಾಷನಲ್’ ವರದಿ ಮಾಡಿದೆ.
ಸರ್ಕಾರಿ ನೌಕರರ (ನಡತೆ) ನಿಯಮಗಳು, 1964ರ ಅಡಿಯಲ್ಲಿನ ಸೂಚನೆಗಳನ್ನು ಅನುಸರಿಸಲು ಸರ್ಕಾರಿ ನೌಕರರಿಗೆ ಸೂಚಿಸಲಾಗಿದೆ. ಅನುಮತಿಯಿಲ್ಲದೆ ಸರ್ಕಾರಿ ನೌಕರರು ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುವಂತಿಲ್ಲ. ಸರಕಾರದ ಗೌರವದ ಮೇಲೆ ಪರಿಣಾಮ ಬೀರುವ ಅಭಿಪ್ರಾಯ ಅಥವಾ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುವಂತಿಲ್ಲ. ಸರಕಾರದ ನೀತಿ, ನಿರ್ಧಾರ, ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಘನತೆಯ ವಿರುದ್ಧ ಹೇಳಿಕೆ ನೀಡುವಂತಿಲ್ಲ. ಆದೇಶದಲ್ಲಿ ನೀಡಿರುವ ಸೂಚನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳ ಧನಾತ್ಮಕ ಬಳಕೆಯನ್ನು ನಿಷೇಧಿಸುವ ಉದ್ದೇಶವಿಲ್ಲ. ಆದರೆ ಸರ್ಕಾರಿ ನೌಕರರು ಸಾಮಾಜಿಕ ಮಾಧ್ಯಮದಲ್ಲಿ ನೀಡುವ ಹೇಳಿಕೆಗಳು ಇತರ ದೇಶಗಳೊಂದಿಗೆ ಪಾಕಿಸ್ತಾನದ ಸಂಬಂಧದ ಮೇಲೆ ಪರಿಣಾಮ ಬೀರಬಾರದು. ಆದ್ದರಿಂದ ಆಕ್ಷೇಪಾರ್ಹ ವಿಷಯಗಳನ್ನು ತೆಗೆದು ಹಾಕಲು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ನಿಗಾ ವಹಿಸುವಂತೆ ಇಲಾಖೆ, ಮಂಡಳಿ, ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.