ಹೊಸದಿಲ್ಲಿ : ಯುವ ವಯಸ್ಕರು, ಮುಖ್ಯವಾಗಿ ಪುರುಷರು ಮತ್ತು ಕಡಿಮೆ ಶಿಕ್ಷಣ ಹೊಂದಿರುವ, ಗ್ರಾಮೀಣ ಪ್ರದೇಶಗಳ ಹಿನ್ನೆಲೆಯಿಂದ ಬಂದವರು ಈಗಲೂ ಗರ್ಭಪಾತದ ಬಗ್ಗೆ ಮುಕ್ತವಾಗಿ ಚರ್ಚಿಸುವುದಿಲ್ಲ ಮತ್ತು ಅವಿವಾಹಿತ ಹೆಣ್ಣುಮಕ್ಕಳು ಗರ್ಭಪಾತ ಮಾಡಿಕೊಳ್ಳುವ ಬಗ್ಗೆ ಹೆಚ್ಚು ಮಡಿವಂತರಾಗಿರುತ್ತಾರೆ ಎಂದು ಇತ್ತೀಚಿನ ರಾಷ್ಟ್ರವ್ಯಾಪಿ ಸಮೀಕ್ಷೆಯೊಂದು ಬೆಟ್ಟು ಮಾಡಿದೆ.
ಕುತೂಹಲಕರವಾಗಿ, ದೇಶದಲ್ಲಿ ಮೊದಲ ಬಾರಿಗೆ ನಡೆಸಲಾದ ಈ ಸಮೀಕ್ಷೆಯು ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಹೆಣ್ಣುಮಕ್ಕಳ ಸ್ವಾಯತ್ತತೆಯನ್ನು ಹೆಚ್ಚಿನ ಮಹಿಳೆಯರು ಬೆಂಬಲಿಸುತ್ತಾರೆ ಮತ್ತು ಅವರೇ ಪ್ರಮುಖವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಉಭಯ ಲಿಂಗಗಳಿಗೆ ಸೇರಿದ ಗಮನಾರ್ಹ ಸಂಖ್ಯೆಯ ಜನರು ಒಪ್ಪುತ್ತಿಲ್ಲ ಎನ್ನುವುದನ್ನು ತೋರಿಸಿದೆ.
ಪುರುಷರಿಗೆ ಹೋಲಿಸಿದರೆ ಒಂಟಿ ಯುವತಿ ಗರ್ಭಪಾತ ಮಾಡಿಸಿಕೊಳ್ಳಲು ಮಹಿಳೆಯರು ಹೆಚ್ಚು ಬೆಂಬಲ ನೀಡುತ್ತಾರೆ ಎಂದು ಸಮೀಕ್ಷೆಯ ವರದಿಯು ತಿಳಿಸಿದೆ.
ಐಪಾಸ್ ಡೆವಲಪ್‌ಮೆಂಟ್ ಫೌಂಡೇಷನ್(ಐಡಿಎಫ್) ನಡೆಸಿದ್ದ ದೇಶವ್ಯಾಪಿ ಸಮೀಕ್ಷೆಯ ವರದಿಯು ಮಂಗಳವಾರ ಬಿಡುಗಡೆಗೊಂಡಿದೆ.
18ರಿಂದ 24 ವರ್ಷ ವಯೋಮಾನದವರಿಗೆ ಹೋಲಿಸಿದರೆ 32 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಪ್ರಾಯದ ಜನರು ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಗರ್ಭಪಾತದ ಕುರಿತು ಹೆಚ್ಚು ಮುಕ್ತವಾಗಿ ಮಾತನಾಡುತ್ತಾರೆ ಎಂದು ಸಮೀಕ್ಷೆಯು ತಿಳಿಸಿದೆ.
ಸಮೀಕ್ಷೆಯಲ್ಲಿ 13,255 ಜನರು ಭಾಗಿಯಾಗಿದ್ದು, ಈ ಪೈಕಿ ಶೇ.59ರಷ್ಟು ಮಹಿಳೆಯರಾಗಿದ್ದರು. ಶೇ.71ರಷ್ಟು ಜನರು ಗರ್ಭಪಾತದ ಬಗ್ಗೆ ಸಕಾರಾತ್ಮಕ ಧೋರಣೆಯನ್ನು ಹೊಂದಿದ್ದಾರೆ. ಆದರೆ ಅವಿವಾಹಿತ ಮಹಿಳೆಯ ಗರ್ಭಪಾತದ ವಿಷಯದಲ್ಲಿ ಈ ಪ್ರಮಾಣ ಶೇ.62ಕ್ಕೆ ಇಳಿದಿದೆ.
ದೇಶದಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ಹೆಚ್ಚಿನವರು (ಶೇ.72) ಹೇಳಿದ್ದರೆ, ಕೇವಲ ಮೂರನೇ ಒಂದರಷ್ಟು ಜನರು ಗರ್ಭಪಾತದ ಬಗ್ಗೆ ಒಲವು ಹೊಂದಿಲ್ಲ. ಶೇ.11ರಷ್ಟು ಜನರು ಈ ವಿಷಯದಲ್ಲಿ ಅನಿಶ್ಚಿತತೆಯನ್ನು ವ್ಯಕ್ತಪಡಿಸಿದ್ದಾರೆ.
ಪುರುಷರಿಗೆ ಹೋಲಿಸಿದರೆ ಮಹಿಳೆಯರು ಅವಿವಾಹಿತ ಹೆಣ್ಣುಮಕ್ಕಳ ಗರ್ಭಪಾತಕ್ಕೆ ಬೆಂಬಲಿಸುವ ಸಾಧ್ಯತೆ ಹೆಚ್ಚು. ಗರ್ಭಪಾತದ ಕುರಿತು ನಿಲುವುಗಳ ಮೇಲೆ ಪ್ರಭಾವ ಬೀರುವಲ್ಲಿ ಶಿಕ್ಷಣವೂ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಅಧ್ಯಯನವು ಹೇಳಿದೆ.
ಭಾರತದಲ್ಲಿ ಪ್ರತಿವರ್ಷ ಅಂದಾಜು 1.56 ಕೋಟಿ ಗರ್ಭಪಾತಗಳು ನಡೆಯುತ್ತವೆ. ಎಲ್ಲ ಗರ್ಭಧಾರಣೆಗಳ ಪೈಕಿ ಮೂರನೇ ಒಂದರಷ್ಟು ಹೆಣ್ಣುಮಕ್ಕಳು ಗರ್ಭಪಾತ ಮಾಡಿಸಿಕೊಳ್ಳುತ್ತಾರೆ. ಗರ್ಭಪಾತವು ಅಷ್ಟೊಂದು ಸಾಮಾನ್ಯವಾಗಿದ್ದರೂ ಹೆಚ್ಚು ಮಾತನಾಡದಿರುವ ವಿಷಯವಾಗಿಯೇ ಉಳಿದಿದೆ ಎಂದು ಐಡಿಎಫ್‌ನ ಸಂಶೋಧನೆ ಮತ್ತು ಮೌಲ್ಯಮಾಪನ ವಿಭಾಗದ ಮುಖ್ಯ ತಾಂತ್ರಿಕ ಅಧಿಕಾರಿ ಸುಶಾಂತ ಕೆ.ಬ್ಯಾನರ್ಜಿ ಸುದ್ದಿಸಂಸ್ಥೆಗೆ ತಿಳಿಸಿದರು.
1971ರಿಂದ ಭಾರತದಲ್ಲಿ ಗರ್ಭಪಾತ ಕಾನೂನುಬದ್ಧವಾಗಿದ್ದರೂ ಶೇ.30ಕ್ಕೂ ಅಧಿಕ ಜನರು ಅದು ಕಾನೂನುಬಾಹಿರ ಎಂದು ಈಗಲೂ ಭಾವಿಸಿದ್ದಾರೆ. ತುಲನಾತ್ಮಕವಾಗಿ ಪ್ರಗತಿಪರ ಕಾನೂನು ನಿಬಂಧನೆಗಳು ವಿವಿಧ ಕಾರಣಗಳಿಂದಾಗಿ 24 ವಾರಗಳ ಗರ್ಭಾವಸ್ಥೆಯವರೆಗೆ ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿವೆ ಎಂದು ಐಡಿಎಫ್‌ನ ಮುಖ್ಯ ಕಾರ್ಯಕಾರಿ ಅಧಿಕಾರಿ ವಿನೋಜ್ ಮ್ಯಾನಿಂಗ್ ಹೇಳಿದರು.