EBM News Kannada
Leading News Portal in Kannada

‘ಬಾಲ್ಯವಿವಾಹ’ ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

0


ಬೆಂಗಳೂರು : ಬಾಲ್ಯ ವಿವಾಹವನ್ನು ತಡೆಗಟ್ಟಲು ಪಾಲಕರು ಸೇರಿದಂತೆ ಎಲ್ಲರ ಸಹಕಾರ ಅತ್ಯಗತ್ಯ. ಆಗ ಮಾತ್ರ ಬಾಲ್ಯವಿವಾಹ ತಡೆಗಟ್ಟಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಬುಧವಾರ ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ವಿಜಯನಗರ ಜಿಲ್ಲೆಯ ಭೀಮಾ ಸಂಘ, ಕಿಶೋರಿಯರ ಸಂಘ, ಯುವ ಧ್ವನಿ ಸ್ವಯಂ ಸೇವಾ ಸಂಸ್ಥೆಯ ಸದಸ್ಯರ ಜೊತೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಲ್ಯವಿವಾಹ ತಡೆಯುವುದು ಕೇವಲ ನಮ್ಮ ಇಲಾಖೆಯ ಕೆಲಸವಲ್ಲ. ಹಲವು ಇಲಾಖೆಗಳ ವ್ಯಾಪ್ತಿಗೆ ಬರುತ್ತದೆ. ಬಾಲ್ಯವಿವಾಹಕ್ಕೆ ಮನೆಯ ಆರ್ಥಿಕ ಪರಿಸ್ಥಿತಿ, ಪ್ರೇಮ ವಿವಾಹ, ಸಿನಿಮಾ ಪ್ರಭಾವ ಕೂಡ ಕಾರಣವಾಗುತ್ತದೆ. ಎಲ್ಲರೂ ಸೇರಿ ಬಾಲ್ಯ ವಿವಾಹ ತಡೆಯಲು ಪ್ರಯತ್ನಿಸೋಣ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಹದಿಹರೆಯದ ಮಕ್ಕಳ ಹಾಗೂ ಯುವಜನರಿಗೆ ಸಂಬಂಧಿಸಿದ ವಿಷಯಗಳ ಕುರಿತು ಸಂವಾದದಲ್ಲಿ ಸಮಾಲೋಚನೆ ನಡೆಸಲಾಯಿತು. ಪೌಷ್ಟಿಕಾಂಶದ ಆಹಾರ ಪದಾರ್ಥಗಳ ವಿತರಣೆ ಹಾಗೂ ಶುಚಿ ಪ್ಯಾಡ್ ಗಳ ವಿತರಣೆ, ಮಕ್ಕಳಿಗೆ ಶಿಕ್ಷಣ ಅಥವಾ ಉದ್ಯೋಗಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ವೇಳೆ ತಂದೆ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕಾಗಿರುವುದು, ಮದ್ಯ ಮಾರಾಟ, ವಿಕಲ ಚೇತನ ಮಕ್ಕಳಿಗೆ ಅಗತ್ಯ ಸೌಲಭ್ಯಗಳ ಕೊರತೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಎನ್ ಜಿಒ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.

ಈ ವೇಳೆ ಸ್ವಯಂ ಸೇವಾ ಸಂಸ್ಥೆಯ ಸಹ ನಿರ್ದೇಶಕಿ ಕೃಪಾ ಎಂ.ಎಂ, ಕಾರ್ಯಕಾರಿ ನಿರ್ದೇಶಕಿ ಕವಿತಾ ರತ್ನ, ಸಂಯೋಜಕಿ ದೀಪ್ತಿ ಹಾಗೂ ವಿಜಯನಗರದ ಸ್ನೇಹ ಫೌಂಡೇಶನ್, ಸಖಿ ಟ್ರಸ್ಟ್ ಕಾರ್ಯಕರ್ತರು, ಸಚಿವರ ಆಪ್ತ ಕಾರ್ಯದರ್ಶಿ ಡಾ.ಟಿ.ಎಚ್.ವಿಶ್ವನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಜಂಟಿ ನಿರ್ದೇಶಕಿ ಅಕ್ಕಮಹಾದೇವಿ ಉಪಸ್ಥಿತರಿದ್ದರು.

Leave A Reply

Your email address will not be published.