ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಗೋಮಾಂಸ ಸಾಗಣೆದಾರರ ಮೇಲೆ ನಡೆದ ದಾಳಿಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು ಫೇಸ್‍ಬುಕ್, ಟೆಲಿಗ್ರಾಂನ ಗುಂಪುಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿ 23 ಮಂದಿಯನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಈ ಸಂಬಂಧ ಮಾಹಿತಿ ನೀಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಆಂಧ್ರಪ್ರದೇಶದ ಹಿಂದೂಪುರದಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಬೆಂಗಳೂರಿನ ಶಿವಾಜಿನಗರಕ್ಕೆ ಸೆ.24ರಂದು ಐದು ಗೂಡ್ಸ್ ವಾಹನಗಳಲ್ಲಿ ಗೋಮಾಂಸ ರವಾನಿಸುತ್ತಿದ್ದ ವೇಳೆ ಸಾಗಾಟಗಾರರನ್ನು ಅಡ್ಡಗಟ್ಟಿ ಶ್ರೀರಾಮಸೇನೆ ಕಾರ್ಯಕರ್ತರು ಹಲ್ಲೆ ನಡೆಸಿ ಕಾರಿಗೆ ಬೆಂಕಿ ಹಚ್ಚಿದ್ದ ಸಂಬಂಧ ಎರಡು ಪ್ರಕರಣಗಳನ್ನು ದಾಖಲಿಸಿ 23 ಮಂದಿಯನ್ನು ಬಂಧಿಸಲಾಗಿದೆ ಎಂದರು.
ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಎರಡು ಸಮುದಾಯಗಳ ನಡುವೆ ದ್ವೇಷವನ್ನು ಹರಡುತ್ತಿರುವ ಆರೋಪದ ಮೇಲೆ 6 ಸಾಮಾಜಿಕ ಮಾಧ್ಯಮ ಗ್ರೂಪ್‍ಗಳ ವಿರುದ್ಧ ಸೈಬರ್ ಕ್ರೈಮ್ ಪ್ರಕರಣವನ್ನು ಸಿಇಎನ್ ಕ್ರೈಮ್ ಪೊಲೀಸರು ದಾಖಲಿಸಿದ್ದಾರೆ ಎಂದು ಮಲ್ಲಿಕಾರ್ಜುನ್ ಬಾಲದಂಡಿ ಹೇಳಿದರು.
ಸಾಮಾಜಿಕ ಜಾಲತಾಣದ ಮಾನಿಟರಿಂಗ್ ಸೆಲ್ ಸಿಬ್ಬಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ‘ದೊಡ್ಡಬಳ್ಳಾಪುರ ಟುಡೇ ನ್ಯೂಸ್’, ‘ಕೇಸರಿ ರಾಷ್ಟ್ರ’, ‘ವಾರ್ತಾಗುರು’ ಮತ್ತು ‘ಸಾರ್ವಜನಿಕ ಸಮಸ್ಯೆ’ ಎಂಬ ನಾಲ್ಕು ಫೇಸ್‍ಬುಕ್ ಗ್ರೂಪ್‍ಗಳು ಆನ್‍ಲೈನ್‍ನಲ್ಲಿ ಘಟನೆಯ ವಿಡಿಯೋಗಳನ್ನು ಹಂಚಿಕೊಂಡಿವೆ. ಅಲ್ಲದೆ, ‘ಥಗ್ಸ್ ಆಫ್ ದೊಡ್ಡಬಳ್ಳಾಪುರ’ ಮತ್ತು ‘ಸಿವು ಹಿಂದು ಹುಲಿ 2.0’ ಎಂಬ ಎರಡು ಟೆಲಿಗ್ರಾಮ್ ಗ್ರೂಪ್‍ಗಳೂ ವೀಡಿಯೊಗಳನ್ನು ಹಂಚಿಕೊಂಡಿವೆ ಎಂದು ಮಲ್ಲಿಕಾರ್ಜುನ್ ಬಾಲದಂಡಿ ಮಾಹಿತಿ ನೀಡಿದರು.
ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ
https://bit.ly/3tfd2Ro ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.