ಹೊಸದಿಲ್ಲಿ: ಅದಾನಿ ಪವರ್ ಲಿ.ನಲ್ಲಿ ಅತ್ಯಂತ ದೊಡ್ಡ ಸಾರ್ವಜನಿಕ ಹೂಡಿಕೆದಾರ ಓಪಾಲ್ ಇನ್ವೆಸ್ಟ್ಮೆಂಟ್ ಪ್ರೈ.ಲಿ. 2019ರಲ್ಲಿ ಯುಎಇಯಲ್ಲಿ ಸ್ಥಾಪನೆಗೊಂಡ ‘ಏಕವ್ಯಕ್ತಿ ಕಂಪನಿ’ಯಾಗಿದೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಓಪಾಲ್ ಇನ್ವೆಸ್ಟ್ಮೆಂಟ್ ಸೆಬಿಯಿಂದ ತನಿಖೆಗೊಳಪಟ್ಟಿರುವ ಅದಾನಿ ಗ್ರೂಪ್ ನ 13 ವಿದೇಶಿ ನಿಧಿಗಳಲ್ಲಿ ಒಂದಾಗಿದೆ.
ಓಪಾಲ್ ಇನ್ವೆಸ್ಟ್ಮೆಂಟ್ ಅನ್ನು ನಿಯಂತ್ರಿಸುತ್ತಿರುವ ಶೇರುದಾರ ಝೆನಿತ್ ಕಮಾಡಿಟೀಸ್ ಜನರಲ್ ಟ್ರೇಡಿಂಗ್ ಎಲ್ಎಲ್ಸಿಯು ಯುಎಇಯ ಅಡೆಲ್ ಹಸನ್ ಅಹ್ಮದ್ ಅಲಾಲಿ ಅವರ ಒಡೆತನದಲ್ಲಿದೆ ಎಂದು ತೋರಿಸುವ ದಾಖಲೆಗಳು ಲಭ್ಯವಾಗಿವೆ ಎಂದು ವರದಿಯು ತಿಳಿಸಿದೆ.
2020 ಜುಲೈನಲ್ಲಿ ಅಡೆಲ್ ಓಪಾಲ್ ಇನ್ವೆಸ್ಟ್ಮೆಂಟ್ಸ್ (ಮಾರಿಷಸ್)ನ ನಿರ್ದೇಶಕರಾಗಿಯೂ ಸೇರ್ಪಡೆಗೊಂಡಿದ್ದರು.
ವರದಿಯ ಪ್ರಕಾರ ‘ದುಬೈನ ಏಕವ್ಯಕ್ತಿ ವ್ಯವಸ್ಥೆ’ಯು ಅದಾನಿ ಪವರ್ನಲ್ಲಿ ಓಪಾಲ್ ಇನ್ವೆಸ್ಟ್ಮೆಂಟ್ ಹೊಂದಿರುವ 8,000 ಕೋಟಿ ರೂ.(ಪ್ರಸ್ತುತ ಮಾರುಕಟ್ಟೆ ಮೌಲ್ಯ)ಗಳ ಶೇರುಗಳ ಒಡೆತನವನ್ನು ಹೊಂದಿದೆ ಮತ್ತು ಅವುಗಳನ್ನು ನಿಯಂತ್ರಿಸುತ್ತಿದೆ.
ಅದಾನಿ ಗ್ರೂಪ್ ಗೆ ಭಾರೀ ಹೊಡೆತವನ್ನು ನೀಡಿದ್ದ ಅಮೆರಿಕದ ಹಿಂಡೆನ್‌ಬರ್ಗ್ ರೀಸರ್ಚ್ ನ ವರದಿಯು ಓಪಾಲ್ ಇನ್ವೆಸ್ಟ್ಮೆಂಟ್ ಕೇವಲ ಅದಾನಿ ಪವರ್ ಶೇರುಗಳನ್ನು ಹೊಂದಿದೆ, ಇತರ ಯಾವುದೇ ಕಂಪನಿಗಳ ಶೇರುಗಳಲ್ಲಿ ಅದು ಹೂಡಿಕೆ ಮಾಡಿಲ್ಲ ಎಂದು ಬೆಟ್ಟು ಮಾಡಿತ್ತು. ಅದು ಯಾವುದೇ ವೆಬ್ಸೈಟ್ ಹೊಂದಿಲ್ಲ, ಲಿಂಕ್ಡ್ಇನ್ನಲ್ಲಿ ಅದರ ಉದ್ಯೋಗಿಗಳೂ ಇಲ್ಲ ಎಂದೂ ಅದು ಹೇಳಿತ್ತು.
ಅದಾನಿ ಗ್ರೂಪ್ ನ ಅಧ್ಯಕ್ಷ ಗೌತಮ್ ಅದಾನಿಯವರ ಸಹೋದರ ವಿನೋದ್ ಅದಾನಿ ನಿಯಂತ್ರಿಸುತ್ತಿರುವ ಕೃಣಾಲ್ ಟ್ರೇಡ್ ಆ್ಯಂಡ್ ಇನ್ವೆಸ್ಟ್ಮೆಂಟ್ ಪ್ರೈ.ಲಿ.ಸ್ಥಾಪನೆಯಾದ ದಿನಾಂಕದಂದೇ ಅದೇ ನ್ಯಾಯವಾಪ್ತಿಯಲ್ಲಿ ಓಪಾಲ್ ಇನ್ವೆಸ್ಟ್ಮೆಂಟ್ಸ್ (ಮಾರಿಷಸ್) ಸ್ಥಾಪನೆಗೊಂಡಿತ್ತು. ಕೃಣಾಲ್ ಟ್ರೇಡ್ನ ಸ್ಥಾಪನೆಗೆ ನೆರವಾಗಿದ್ದ ನೋಂದಾಯಿತ ಏಜೆಂಟ್ ಟ್ರಸ್ಟ್ ಲಿಂಕ್ ಇಂಟರ್ನ್ಯಾಷನಲ್ ಈ ಕಂಪನಿಯ ಸ್ಥಾಪನೆಗೂ ನೆರವಾಗಿತ್ತು.
ಹಿಂಡೆನ್‌ಬರ್ಗ್ ತನ್ನ ವರದಿಯಲ್ಲಿ ಮಾರಿಷಸ್ ನಿಧಿಗೂ ಅದಾನಿ ಗ್ರೂಪ್ ಗೆ ತಳುಕು ಹಾಕಿದ ಬಳಿಕ ಓಪಾಲ್ ಇನ್ವೆಸ್ಟ್ಮೆಂಟ್ ತನ್ನ ಕಾರ್ಪೊರೇಟ್ ಏಜೆಂಟ್ ಆಗಿದ್ದ ಟ್ರಸ್ಟ್ ಲಿಂಕ್ ಇಂಟರ್ನ್ಯಾಷನಲ್ ಅನ್ನು ಕೈಬಿಟ್ಟಿದೆ ಮತ್ತು ವೆಬ್‌ಸೈಟ್‌ನ್ನು ರೂಪಿಸಿದೆ. ಓಪಾಲ್ ಇನ್ವೆಸ್ಟ್ಮೆಂಟ್ ಜೂ.14ರಂದು ಎಲ್ಟಿಎಸ್ ಮ್ಯಾನೇಜ್ಮೆಂಟ್ ಸರ್ವಿಸಿಸ್ ಲಿ.ಅನ್ನು ತನ್ನ ಕಾರ್ಪೊರೇಟ್ ಏಜೆಂಟ್ ಆಗಿ ನೇಮಕ ಮಾಡಿಕೊಂಡಿತ್ತು. ಅದೇ ದಿನ ತನ್ನ ವಿಳಾಸವನ್ನು ಟ್ರಸ್ಟ್ ಲಿಂಕ್ ಹೌಸ್ ನಿಂದ ಎಲ್ಟಿಎಸ್ ನ ಕಚೇರಿಗೆ ಬದಲಿಸಿಕೊಂಡಿತ್ತು ಎನ್ನುವುದನ್ನು ಲಭ್ಯ ದಾಖಲೆಗಳು ತೋರಿಸಿವೆ.
ಹಿಂದೆ ಹಿಂಡೆನ್ಬಗ್ ವರದಿಯಲ್ಲಿನ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಅದಾನಿ ಗ್ರೂಪ್, ಓಪಾಲ್ ಇನ್ವೆಸ್ಟ್ಮೆಂಟ್ ತನ್ನ ಲಿಸ್ಟೆಡ್ ಕಂಪನಿಗಳಲ್ಲಿ ಸಾರ್ವಜನಿಕ ಹೂಡಿಕೆದಾರರಲ್ಲಿ ಒಂದಾಗಿದೆ. ಲಿಸ್ಟೆಡ್ ಕಂಪನಿಯು ಸಾರ್ವಜನಿಕವಾಗಿ ವಹಿವಾಟಾಗುತ್ತಿರುವ ಶೇರುಗಳನ್ನು ಯಾರು ಖರೀದಿಸುತ್ತಾರೆ/ಮಾರಾಟ ಮಾಡುತ್ತಾರೆ/ಒಡೆತನವನ್ನು ಹೊಂದುತ್ತಾರೆ ಅಥವಾ ಎಷ್ಟು ಶೇರುಗಳು ವಹಿವಾಟು ಆಗಿವೆ ಎನ್ನುವುದರ ಮೇಲೆ ನಿಯಂತ್ರಣ ಹೊಂದಿರುವುದಿಲ್ಲ. ಹೀಗಾಗಿ ಶೇರು ಮಾರಾಟದ ವೈಖರಿ ಅಥವಾ ಸಾರ್ವಜನಿಕ ಹೂಡಿಕೆದಾರರ ನಡವಳಿಕೆಯ ಬಗ್ಗೆ ನಾವು ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.