International Lion Day 2023: ವಿಶ್ವ ಸಿಂಹ ದಿನದ ಇತಿಹಾಸ ಏನು? ಕಾಡಿನ ರಾಜನ ಸಂತತಿ ಅಳಿವಿನಂಚಿನಲ್ಲಿ – Kannada News | Why is World Lion Day celebrated? Here is the information about the background of this day Lifestyle News
ಒಂದೆಡೆ ಜಗತ್ತಿನಾದ್ಯಂತ ಸಿಂಹಗಳ ಸಂಖ್ಯೆ ಕ್ಷೀಣಿಸುತ್ತಿವೆ. ಈ ಸಿಂಹಗಳ ಉಳಿವಿಗಾಗಿ ಪ್ರತಿವರ್ಷ ಆಗಸ್ಟ್ 10 ರಂದು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಯಾವಾಗ ಆಚರಣೆಗೆ ಬಂದಿತು, ಈ ದಿನ ಮಹತ್ವವೇನು ಎಂಬುದನ್ನು ನೋಡೋಣ.
ಸಾಂದರ್ಭಿಕ ಚಿತ್ರ
ಈ ಭೂಮಿಯಲ್ಲಿ ಮನುಷ್ಯರಂತೆಯೇ ಹಲವು ಬಗೆಯ ಪ್ರಾಣಿಗಳು, ಪಕ್ಷಿಗಳು ಹಾಗೂ ಇನ್ನಿತರ ಜೀವರಾಶಿಗಳು ಜೀವಿಸುತ್ತಿದೆ. ಆದರೆ ಇಂದು ಆಧುನೀಕರಣ ಹಾಗೂ ಮನುಷ್ಯನ ಸ್ವಾರ್ಥದಿಂದಾಗಿ ಭೂಮಿಯ ಮೇಲಿನ ಅದೆಷ್ಟೋ ಜೀವಿಗಳು ಅಳಿವಿನಂಚಿನಲ್ಲಿವೆ. ಅವುಗಳಲ್ಲಿ ಸಿಂಹವೂ ಕೂಡ ಒಂದು. ಅರಣ್ಯ ನಾಶ, ಅಕ್ರಮ ಬೇಟೆ ಈ ಎಲ್ಲಾ ಕಾರಣದಿಂದ ಹುಲಿಗಳಂತೆ ಸಿಂಹಗಳ ಸಂಖ್ಯೆಯೂ ಕ್ಷೀಣಿಸುತ್ತಿದೆ. ಹಾಗಾಗಿ ಈ ಭೂಮಿಯ ಮೇಲೆ ಕಾಡಿನ ರಾಜನ ಸಂತತಿಯ ಉಳಿವಿಗಾಗಿ ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಆಗಸ್ಟ್ 10 ರಂದು ಅಂತರಾಷ್ಟ್ರೀಯ ಸಿಂಹ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಯಾವಾಗ ಆಚರಣೆಗೆ ಬಂತು ಹಾಗೂ ಈ ಆಚರಣೆಯ ಮಹತ್ವವೇನು ಎಂಬುದನ್ನು ತಿಳಿಯಿರಿ.
ವಿಶ್ವ ಸಿಂಹ ದಿನ ಆಚರಣೆ ಯಾವಾಗ ಪ್ರಾರಂಭವಾಯಿತು?
ಸಿಂಹಗಳ ಉಳಿವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅವುಗಳಿಗೆ ರಕ್ಷಣೆ ನೀಡುವ ಪ್ರಯತ್ನಗಳಿಗಾಗಿ 2013ರಲ್ಲಿ ವಿಶ್ವ ಸಿಂಹ ದಿನಾಚರಣೆಯನ್ನು ಆಚರಿಸಲು ಪ್ರಾರಂಭಿಸಲಾಯಿತು. ಸಿಂಹ ಮತ್ತು ಹುಲಿಗಳ ರಕ್ಷಣೆಗಾಗಿ ಕೆಲಸ ಮಾಡುವ ಸಂಸ್ಥೆಯಾದ ಬಿಗ್ ಕ್ಯಾಟ್ಸ್ ರೆಸ್ಕ್ಯೂ ನ ಸಂಸ್ಥಾಪಕರಾದ ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್ ಅವರು ನ್ಯಾಷನಲ್ ಜಿಯೋಗ್ರಾಫಿಕ್ ಸಹಭಾಗಿತ್ವದಲ್ಲಿ ಸಿಂಹ ದಿನವನ್ನು ಸ್ಥಾಪಿಸಿದರು.
ಕ್ಷೀಣಿಸುತ್ತಿರುವ ಸಿಂಹಗಳ ಸಂಖ್ಯೆ ಮತ್ತು ಅವುಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬಹುದು ಈ ದಿನದ ಆರಣೆಯ ಮುಖ್ಯ ಉದ್ದೇಶವಾಗಿದೆ. ಜನರು ಅಕ್ರಮವಾಗಿ ಸಿಂಹಗಳನ್ನು ಬೇಟೆಯಾಡಿ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ, ಹಾಗೂ ಕಾಡುಗಳ ನಾಶದಿಂದ ಸಿಂಹಗಳ ಸಂಖ್ಯೆ ಕ್ಷೀಣಿಸುತ್ತಿದೆ. ಆದ್ದರಿಂದ ಪರಿಸರ ವ್ಯವಸ್ಥೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಸಿಂಹಗಳು ಈ ಭೂಮಿ ಮೇಲೆ ಇರುವುದು ಬಹಳ ಮುಖ್ಯ. ಆದರೆ ಕ್ರಮೇಣ ಕಳ್ಳಸಾಗಣಿಕೆ ಮತ್ತು ಅಕ್ರಮ ಬೇಟೆಗಾರರಿಂದ ಸಿಂಹಗಳ ಜಾತಿಗಳು ಮತ್ತು ಸಂಖ್ಯೆಗಳು ನಶಿಸುತ್ತಿವೆ, ಆಧ್ದರಿಂದ ಅವುಗಳಿಗೆ ರಕ್ಷಣೆ ನೀಡುವುದು ಬಹಳ ಮುಖ್ಯ. ಅದಕ್ಕಾಗಿಯೇ ಈ ದಿನವನ್ನು ಆಚರಿಸಲಾಗುತ್ತದೆ.
ಸಿಂಹಗಳ ಇತಿಹಾಸದ ಬಗ್ಗೆ ಮಾತನಾಡುವುದಾದರೆ, ಸುಮಾರು ಮೂರು ಮಿಲಿಯನ್ ವರ್ಷಗಳ ಹಿಂದೆ, ಸಿಂಹಗಳು ಏಷ್ಯಾ, ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಯೂರೋಪ್ನಲ್ಲಿ ಮುಕ್ತವಾಗಿ ವಿಹರಿಸುತ್ತಿದ್ದವು. ಆದರೆ ಕಳೆದ 100 ವರ್ಷಗಳಲ್ಲಿ ಸಿಂಹಗಳ ಸಂಖ್ಯೆ 80 ಶೇಕಡದಷ್ಟು ಕಣ್ಮರೆಯಾಗಿವೆ. ಹಾಗಾಗಿ ಜಾಗತಿಕ ಮಟ್ಟದಲ್ಲಿ ಕಾಡಿನ ರಾಜನ ರಕ್ಷಣೆಗಾಗಿ ಹಾಗೂ ಸಿಂಹಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಆಗಸ್ಟ್ 10 ರಂದು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ.
ಅಂತರಾಷ್ಟ್ರೀಯ ಸಿಂಹ ದಿನದ ಮಹತ್ವ:
‘ಪ್ಯಾಂಥೆರಾ ಲಿಯೋ’ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ಸಿಂಹಗಳನ್ನು ಕಾಡಿನ ರಾಜ ಎಂದು ಕರೆಯಲಾಗುತ್ತದೆ. ಅವುಗಳು ತಮ್ಮ ಗತ್ತು ಗಾಂಭೀರ್ಯಕ್ಕೆ ಹೆಸರುವಾಸಿಯಾದ ಪ್ರಾಣಿಗಳಾಗಿವೆ. ಆದರೆ ಇಂದು ಈ ಪ್ರಾಣಿಯ ಸಂತತಿ ಅಳಿವಿನಂಚಿನಲ್ಲಿದೆ. ಹಾಗಾಗಿ ಪರಿಸರ ವ್ಯವಸ್ಥೆ ಮತ್ತು ಆಹಾರ ಸರಪಳಿಗೆ ಸಿಂಹಗಳ ಪ್ರಾಮುಖ್ಯತೆಯನ್ನು ಎತ್ತಿಹಿಡಿಯಲು ಈ ದಿನವನ್ನು ಆಚರಿಸಲಾಗುತ್ತಿದೆ. ಸಿಂಹಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಅವುಗಳ ಉಳಿವಿಗಾಗಿ ಹೆಚ್ಚಿನ ವನ್ಯಜೀವಿ ಅಭಯಾರಣ್ಯಗಳನ್ನು ರಚಿಸುವುದು ಅತ್ಯಗತ್ಯ. ಆದ್ದರಿಂದ ಸಿಂಹಗಳನ್ನು ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸಲು ಜನರನ್ನು ಪ್ರೋತ್ಸಾಹಿಸುವುದು ಈ ದಿನದ ಆಚರಣೆಯ ಉದ್ದೇಶವಾಗಿದೆ.
ವಿವಿಧ ಬಗೆಯ ಸಿಂಹಗಳು:
• ಏಷ್ಯಾಟಿಕ್ ಸಿಂಹ
• ಬಿಳಿ ಸಿಂಹ
• ಬಾರ್ಬರಿ ಸಿಂಹ
• ಕಟಾಂಗ ಸಿಂಹ (ನೈಋತ್ಯ ಆಫ್ರಿಕಾದ ಸಿಂಹ)
• ಸೊಮಾಲಿ ಸಿಂಹ
• ಸೆನೆಗಲೆನ್ಸಿಸ್ ಸಿಂಹ ( ಪಶ್ಚಿಮ ಆಫ್ರಿಕಾದ ಸಿಂಹ)
• ಅಬಿಸ್ಸಿನಿಯನ್ ಸಿಂಹ
• ಕಾಂಗೋ ಸಿಂಹ
• ಮಸಾಯಿ ಸಿಂಹ ಅಥವಾ ಸೆರೆಂಗೆಟಿ ಸಿಂಹ
• ಕಲಹರಿ ಸಿಂಹ
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: