ಪ್ರಿನ್ಸ್ ಚಾರ್ಲ್ಸ್ ಗುಣಮುಖರಾಗಲು ಆಯುರ್ವೇದ ಚಿಕಿತ್ಸೆ ಕಾರಣವೇ?
ಲಂಡನ್, ಏಪ್ರಿಲ್ 05: ಕೊರೊನಾವೈರಸ್ ಸೋಂಕಿಗೆ ತುತ್ತಾಗಿದ್ದ ಬ್ರಿಟನ್ ಪ್ರಿನ್ಸ್ ಚಾರ್ಲ್ಸ್ ಅವರು ಪ್ರತ್ಯೇಕವಾಗಿ ಉಳಿದು ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಚಾರ್ಲ್ಸ್ ಗುಣಮುಖರಾಗಲು ಆಯುರ್ವೇದ ಪದ್ಧತಿ ಬಳಸಲಾಗಿತ್ತು. ಬೆಂಗಳೂರಿನ ತಜ್ಞರ ನೆರವು ಪಡೆಯಲಾಗಿತ್ತು ಎಂಬ ಸುದ್ದಿಇದೆ. ಆದರೆ, ಇದೆಲ್ಲವೂ ಸತ್ಯಕ್ಕೆ ದೂರವಾಗಿವೆ ಎಂದು ಕ್ಲಾರೆನ್ಸ್ ಹೌಸ್ ಸ್ಪಷ್ಟಪಡಿಸಿದೆ. ಭಾರತದ ಆಯುರ್ವೇದ ವೈದ್ಯ ಪದ್ಧತಿ ಮೊರೆ ಹೋಗಿ ಕೊರೊನಾ ಗೆದ್ದು ಬಂದಿದ್ದಾರೆ. ಕೊರೊನಾ ಸೋಂಕು ಪೀಡಿತರಾಗಿದ್ದ ಬ್ರಿಟನ್‌ನ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್‌ಗೆ ಬೆಂಗಳೂರು ಮೂಲದ ವೈದ್ಯ ಐಸಾಕ್ ಮಥಾಯ್ ಚಿಕಿತ್ಸೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸೌಖ್ಯ ಆಯುರ್ವೇದ ರೆಸಾರ್ಟ್ ಹೊಂದಿರುವ ಐಸಾಕ್ ಮಥಾಯ್ ಇಲ್ಲಿಂದಲೇ ಆಯುರ್ವೇದದ ಚಿಕಿತ್ಸೆ ನೀಡಿದ್ದರು ಎಂದು ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ಹೇಳಿಕೆ ನೀಡಿದ್ದರು. ಈ ಮೂಲಕ ಆಯುರ್ವೇದ ಹಾಗೂ ಹೋಮಿಯೋಪತಿಯಲ್ಲಿ ಕೊರೊನಾ ವೈರಸ್‌ಗೆ ಚಿಕಿತ್ಸೆ ಇದೆ ಎಂದು ಶ್ರೀಪಾದ್ ನಾಯ್ಕ್ ಹೇಳಿದ್ದರು.
ಆದರೆ, ಈ ಬಗ್ಗೆ ಸ್ಪಷ್ಟಣೆ ನೀಡಿರುವ ಕ್ಲಾರೆನ್ಸ್ ಹೌಸ್, ಪ್ರಿನ್ಸ್ ಆಫ್ ವೇಲ್ಸ್ ಗುಣಮುಖರಾಗಲು ಆಯುರ್ವೇದ, ಹೋಮಿಯೋಪತಿ ಚಿಕಿತ್ಸಾ ವಿಧಾನ ಬಳಸಿಲ್ಲ ಎಂದು ಹೇಳಿದೆ. ಇಷ್ಟಕ್ಕೂ ಈ ರೀತಿ ಸುದ್ದಿ ಹಬ್ಬಿದ್ದು ಹೇಗೆ? ಏಕೆ? ಮುಂದೆ ಓದಿ… 71 ವರ್ಷ ವಯಸ್ಸಿನ ಪ್ರಿನ್ಸ್ ಚಾರ್ಲ್ಸ್ ಅವರಿಗೆ ಕಳೆದ ವಾರ ಕೊವಿಡ್19 ಪಾಸಿಟಿವ್ ಎಂದು ತಿಳಿದು ಬಂದಿತ್ತು. ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಕೂಡಾ ಪಾಸಿಟಿವ್ ಎಂದು ತಿಳಿದು ಬಂದಿದ್ದರಿಂದ ಇಂಗ್ಲೆಂಡಿನಲ್ಲಿ ಆತಂಕ ಮೂಡಿತ್ತು. ಆದರೆ, ತಕ್ಷಣವೇ ಪ್ರತ್ಯೇಕ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲಾಯಿತು. ಯುಕೆಯ ರಾಷ್ಟ್ರೀಯ ಆರೋಗ್ಯ ಸೇವೆ(ಎನ್ಎಚ್ಎಸ್) ನೀಡಿದ ಮಾರ್ಗದರ್ಶನವನ್ನು ಅನುಸರಿಸಿ, ಗುಣಮುಖರಾಗಿದ್ದಾರೆ ಎಂದು ಕ್ಲಾರೆನ್ಸ್ ಹೌಸ್ ವಕ್ತಾರರು ಹೇಳಿದ್ದಾರೆ.
ಆಯುರ್ವೇದ ಚಿಕಿತ್ಸೆ ಸುದ್ದಿ ಹಬ್ಬಲು ಕಾರಣ?: ಚಾರ್ಲ್ಸ್ ಅವರು ಆಯುರ್ವೇದ ಪರ ಅನೇಕ ಬಾರಿ ಬಹಿರಂಗವಾಗಿ ಮೆಚ್ಚುಗೆಯ ಮಾತುಗಳಾನ್ನಾಡಿದ್ದಾರೆ. 2018ರ ಏಪ್ರಿಲ್ ನಲ್ಲಿ ಭಾರತದ ಪ್ರಧಾನಿ ಮೋದಿ ಅವರು ಲಂಡನ್ನಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಲಂಡನ್ನಿನ ಸೈನ್ಸ್ ಮ್ಯೂಸಿಯಂನಲ್ಲಿ ಯೋಗ ಮತ್ತು ಆಯುರ್ವೇದ ಸಂಶೋಧನಾ ಕೇಂದ್ರ ಉದ್ಘಾಟಿಸಲಾಗಿತ್ತು.