26/11 ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನನ್ನು ಪಶ್ಚಿಮ ಏಷ್ಯಾಗೆ ರವಾನಿಸಲು ಪಾಕ್ ಗೆ ಚೀನಾ ಸಲಹೆ
ನವದೆಹಲಿ: ಮುಂಬೈ ದಾಳಿಯ ಮಾಸ್ಟಾರ್ ಮೈಂಡ್ ಉಗ್ರ ಹಫೀಜ್ ಸಯೀದ್ ನ್ನು ಪಶ್ಚಿಮ ಏಷ್ಯಾದ ಯಾವುದಾದರೂ ರಾಷ್ಟ್ರಕ್ಕೆ ಸ್ಥಳಾಂತರಿಸುವಂತೆ ತನ್ನ ಪರಮಾಪ್ತ ದೇಶ ಪಾಕಿಸ್ತಾನಕ್ಕೆ ಚೀನಾ ಸಲಹೆ ನೀಡಿದೆ.
ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಾತವಾಗಿದ್ದ ವರದಿಯ ಪ್ರಕಾರ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಅವರು ಪಾಕಿಸ್ತಾನ ಪ್ರಧಾನಿ ಶಾಹಿದ್ ಖಕನ್ ಅಬ್ಬಾಸಿ ಅವರೊಂದಿಗೆ ಚರ್ಚಿಸಿದ್ದು, ಹಫೀಜ್ ಸಯೀದ್ ಸಯೀದ್ ನ್ನು ಪಶ್ಚಿಮ ಏಷ್ಯಾದ ಯಾವುದಾದರೂ ರಾಷ್ಟ್ರಕ್ಕೆ ಕಳಿಸುವಂತೆ ಸೂಚನೆ ನೀಡಿದ್ದಾರೆ.
ಕಳೆದ ತಿಂಗಳು ಚೀನಾದಲ್ಲಿ ಸುಮಾರು 35 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಪಾಕ್ ಪ್ರಧಾನಿಗೆ ಈ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹಫೀಜ್ ಸಯೀದ್ ಸುದ್ದಿ ಮುನ್ನೆಲೆಗೆ ಬಾರದಂತೆ ತಡೆಯುವುದಕ್ಕೆ ಆತನನ್ನು ಪಶ್ಚಿಮ ಏಷ್ಯಾದ ಯಾವುದಾದರೂ ರಾಷ್ಟ್ರದಲ್ಲಿ ಇರಿಸಬೇಕೆಂದು ಚೀನಾ ಅಧ್ಯಕ್ಷರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅಬ್ಬಾಸಿ ತಮ್ಮ ಸರ್ಕಾರದ ಕಾನೂನು ತಂಡದೊಂದಿಗೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲಿದ್ದಾರೆ. ಜುಲೈ ತಿಂಗಳಾಂತ್ಯಕ್ಕೆ ಪಾಕಿಸ್ತಾನದಲ್ಲಿ ಈಗಿರುವ ಸರ್ಕಾರ ಅವಧಿ ಪೂರ್ಣಗೊಳ್ಳಲಿದ್ದು, ಹಫೀಜ್ ಸಯೀದ್ ನನ್ನು ಪಶ್ಚಿಮ ಏಷ್ಯಾದ ಯಾವುದಾದರೂ ರಾಷ್ಟ್ರಕ್ಕೆ ಕಳಿಸುವ ಬಗ್ಗೆ ಮುಂದಿನ ಸರ್ಕಾರ ನಿರ್ಧಾರ ಕೈಗೂಳ್ಳಬೇಕಿದೆ.