EBM News Kannada
Leading News Portal in Kannada

ಕೆನಡಾ | 1984 ಸಿಖ್ ವಿರೋಧಿ ಹಿಂಸಾಚಾರವನ್ನು ಜನಾಂಗೀಯ ಹತ್ಯೆ ಎಂದು ಗುರುತಿಸುವ ನಿರ್ಣಯ ವಿಫಲ | Canada

0


ಟೊರಂಟೊ : ಭಾರತದಲ್ಲಿ 1984ರಲ್ಲಿ ಸಿಖ್ಖರ ವಿರುದ್ಧ ನಡೆದ ಹಿಂಸಾಚಾರವನ್ನು `ಜನಾಂಗೀಯ ಹತ್ಯೆ’ ಎಂದು ಗುರುತಿಸುವಂತೆ ಕೆನಡಾದ ನ್ಯೂ ಡೆಮಾಕ್ರಟಿಕ್ ಪಾರ್ಟಿ(ಎನ್ಡಿಪಿ) ಮಂಡಿಸಿದ ನಿರ್ಣಯವು ಸಂಸದೀಯ ಸಮಿತಿಯ ಅಂಗೀಕಾರ ಪಡೆಯಲು ವಿಫಲವಾಗಿದೆ.

ಈ ವರ್ಷದ ಜೂನ್ 19ರಂದು ನಿರ್ಣಯದ ಬಗ್ಗೆ ನೋಟಿಸ್ ನೀಡಲಾಗಿತ್ತು ಎಂದು ಎನ್ಡಿಪಿ ಮುಖಂಡ ಜಗ್ಮೀತ್ ಸಿಂಗ್ ಹೇಳಿದ್ದಾರೆ. ವಿದೇಶಾಂಗ ವ್ಯವಹಾರಗಳು ಮತ್ತು ಅಂತರಾಷ್ಟ್ರೀಯ ಅಭಿವೃದ್ಧಿ ಕುರಿತ ಸಂಸತ್ನ ಸ್ಥಾಯಿ ಸಮಿತಿಯು ನಿರ್ಣಯದ ಮೇಲಿನ ಚರ್ಚೆಯನ್ನು ಮುಂದೂಡುವ ನಿರ್ಧಾರವನ್ನು ಮತಕ್ಕೆ ಹಾಕಿದಾಗ 9 ಸದಸ್ಯರು ಪರ ಮತ್ತು ಇಬ್ಬರು ವಿರೋಧವಾಗಿ ಮತ ಚಲಾಯಿಸಿದ್ದಾರೆ.

ನಿರ್ಣಯವನ್ನು ಮಂಡಿಸಿದ ಸಿಂಗ್ `1984ರಲ್ಲಿ ಭಾರತದಲ್ಲಿ ಸಿಖ್ಖರ ವಿರುದ್ಧ ಜನಾಂಗೀಯ ಹತ್ಯೆ ನಡೆದಿರುವುದನ್ನು ಗುರುತಿಸುವಂತೆ ಸದನಕ್ಕೆ ಶಿಫಾರಸು ಮಾಡಲು ಮತ್ತು ಈ ಹಿಂಸಾಚಾರಕ್ಕೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಭಾರತ ಸರಕಾರವನ್ನು ಒತ್ತಾಯಿಸುವಂತೆ’ ಸಂಸದೀಯ ಸಮಿತಿಯನ್ನು ಆಗ್ರಹಿಸಿದರು. 1984ರಲ್ಲಿ ಆಗಿನ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ ಭುಗಿಲೆದ್ದ ಹಿಂಸಾಚಾರದ ಸಂತ್ರಸ್ತರೊಂದಿಗೆ `ಒಗ್ಗಟ್ಟಿನ ಪ್ರದರ್ಶನ’ ಇದಾಗಿದೆ ಎಂದು ಸಿಂಗ್ ವಾದಿಸಿದರು.

ಜತೆಗೆ, ಕೆನಡಾದಲ್ಲಿ ಹಿಂಸಾತ್ಮಕ ಅಪರಾಧಗಳಲ್ಲಿ ಭಾರತೀಯ ರಾಜತಾಂತ್ರಿಕರ ಪಾತ್ರದ ಬಗ್ಗೆ ಕೆನಡಾ ಪೊಲೀಸರ ಆರೋಪದ ಬಗ್ಗೆಯೂ ಅವರು ಸಮಿತಿಯ ಗಮನ ಸೆಳೆದರು.

ಈ ಘಟನೆಗಳು ಭಯಾನಕ ಮತ್ತು ದುರಂತ ಎಂದು ಬಣ್ಣಿಸಿದ ಕೆನಡಾ ವಿದೇಶಾಂಗ ವ್ಯವಹಾರಗಳ ಸಂಸದೀಯ ಕಾರ್ಯದರ್ಶಿ ರಾಬ್ ಒಲಿಫಂಟ್ `ಇದು ಕೇವಲ ಭಾರತೀಯ ಸಮಸ್ಯೆಯಲ್ಲ. ಆ ದೇಶದಲ್ಲಿನ ನಮ್ಮ ಜನಸಂಖ್ಯೆಯ ಕಾರಣದಿಂದಾಗಿ ಕೆನಡಾದ ಸಮಸ್ಯೆಯೂ ಆಗಿದೆ’ ಎಂದರು. ಆದರೂ, ಅದನ್ನು ಸಮಿತಿಯು ಅಳವಡಿಸಿಕೊಂಡಿರುವ ಬಗ್ಗೆ ಕಾರ್ಯವಿಧಾನದ ಪ್ರಶ್ನೆಗಳನ್ನು ಎತ್ತಿದರು ಮತ್ತು ಇತರ ಪರ್ಯಾಯಗಳನ್ನು ಸೂಚಿಸಿದರು.

ಇವತ್ತು ವಿದೇಶಾಂಗ ವ್ಯವಹಾರಗಳ ಸಮಿತಿಯಲ್ಲಿ ಲಿಬರಲ್ ಮತ್ತು ಕನ್ಸರ್ವೇಟಿವ್ ಸದಸ್ಯರು ಸಿಖ್ ಜನಾಂಗೀಯ ಹತ್ಯೆಯೆಂದು ಗುರುತಿಸುವ ನಿರ್ಣಯವನ್ನು ತಡೆಯಲು ಜತೆಯಾಗಿದ್ದಾರೆ. ಈ ವಿಷಯದ ಬಗ್ಗೆ ತಿಳಿದುಕೊಳ್ಳಲು ಅವರಿಗೆ ಸಾಕಷ್ಟು ಕಾಲಾವಕಾಶವಿತ್ತು. ಅವರು ಸಮುದಾಯದ ಸದಸ್ಯರನ್ನು ಭೇಟಿಯಾಗಿ ಅವರ ಕಳವಳವನ್ನು ಆಲಿಸಬೇಕಿತ್ತು. ಅದರ ಬದಲು, ಅವರು ನ್ಯಾಯಕ್ಕೆ ಬೆನ್ನು ತಿರುಗಿಸಿದ್ದಾರೆ’ ಎಂದು ಸಿಂಗ್ `ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಿಖ್ ವಿರೋಧಿ ಹಿಂಸಾಚಾರದ 40ನೇ ವಾರ್ಷಿಕದ ಸಂದರ್ಭ ಪಕ್ಷದ ಮುಖಂಡ ಜಗ್ಮೀತ್ ಸಿಂಗ್ ಹಾಗೂ ಪಕ್ಷವು 1984ರ ಸಿಖ್ ನರಮೇಧವನ್ನು ಕೆನಡಾ ಸಂಸತ್ನಲ್ಲಿ ಅಧಿಕೃತವಾಗಿ ಗುರುತಿಸುವ ಪ್ರಯತ್ನ ನಡೆಸಲಿದ್ದಾರೆ ಎಂದು ಎನ್ಡಿಪಿ ಪಕ್ಷ ಹೇಳಿದೆ. 2010ರಲ್ಲಿ ಲಿಬರಲ್ ಪಕ್ಷದ ಸಂಸದ ಸುಖ್ ಧಲೀವಾಲ್ ಕೂಡಾ ಇದೇ ರೀತಿಯ ನಿರ್ಣಯವನ್ನು ಸಂಸತ್ನಲ್ಲಿ ಮಂಡಿಸಿದ್ದರೂ ಅದು ವಿಫಲವಾಗಿತ್ತು.

Leave A Reply

Your email address will not be published.