EBM News Kannada
Leading News Portal in Kannada

ಬೆಂಗಳೂರು | ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಯುವತಿಯನ್ನು ಬೆದರಿಸಿ 2.57 ಕೋಟಿ ರೂ. ಸುಲಿಗೆ; ಆರೋಪಿ ಬಂಧನ | Bangalore

0


ಬೆಂಗಳೂರು : ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡುವುದಾಗಿ ಯುವತಿಗೆ ಬೆದರಿಸಿ 2.57 ಕೋಟಿ ರೂ. ಸುಲಿಗೆ ಮಾಡಿದ್ದ ಪ್ರಕರಣದಡಿ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿರುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಚಾಮರಾಜಪೇಟೆಯ 19 ವರ್ಷದ ಯುವತಿ ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಹೇಳಿದರು.

ದೂರುದಾರ ಯುವತಿ 2017ರಿಂದ 2022ರ ಅವಧಿಯಲ್ಲಿ ದೇವನಹಳ್ಳಿಯ ಖಾಸಗಿ ಶಾಲೆಯಲ್ಲಿ ಹೈಸ್ಕೂಲ್‍ನಲ್ಲಿ ಓದುತ್ತಿದ್ದಾಗ ಆರೋಪಿ ಯುವಕನ ಪರಿಚಯವಾಗಿತ್ತು. ಆ ಸಂದರ್ಭದಲ್ಲಿ ಮದುವೆಯಾಗುವುದಾಗಿ ನಂಬಿಸಿ ಆರೋಪಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಹೈಸ್ಕೂಲ್ ಶಿಕ್ಷಣ ಮುಗಿದ ನಂತರವೂ ಸಹ ಯುವತಿಯನ್ನು ಪಾರ್ಟಿ, ಪ್ರವಾಸ ಎಂದು ಕರೆದೊಯ್ದು, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇಬ್ಬರ ನಡುವಿನ ಖಾಸಗಿ ಕ್ಷಣಗಳ ಫೋಟೋ, ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ ಎಂದು ಬಿ.ದಯಾನಂದ್ ವಿವರಿಸಿದ್ದಾರೆ.

ಇತ್ತೀಚಿಗೆ ತನಗೆ ಹಣದ ಅವಶ್ಯಕತೆಯಿದೆ ಕೊಡು ಎಂದಾಗ ಯುವತಿ ನಿರಾಕರಿಸಿದ್ದಳು. ಹಣ ಕೊಡದಿದ್ದರೆ ಖಾಸಗಿ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಯುವತಿ ಹಣ ಹೊಂದಿಸಿ ಕೊಡಲು ಸಾಧ್ಯವಾಗದಿದ್ದಾಗ ನೇರವಾಗಿ ಅವರ ಮನೆಯವರಿಗೆ ಆಕೆಯ ಖಾಸಗಿ ಫೋಟೋ, ವಿಡಿಯೋ ಕಳಿಸಿ ಬೆದರಿಸಿದ್ದಲ್ಲದೆ, 2.57 ಕೋಟಿ ರೂ. ಸುಲಿಗೆ ಮಾಡಿದ್ದಾನೆ. ಆರೋಪಿ ತನ್ನ ಪ್ರೀತಿಯನ್ನೂ ನಿರಾಕರಿಸಿ ಹಣ ಸುಲಿಗೆ ಮಾಡುವುದನ್ನು ಮುಂದುವರೆಸಿದಾಗ ಕಿರುಕುಳ ತಾಳಲಾರದ ಯುವತಿ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನಿಂದ ಸುಮಾರು 80 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಮತ್ತಷ್ಟು ವಿಚಾರಣೆ ಮುಂದುವರೆದಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.