ಪ್ಯೋಂಗ್ಯಾಂಗ್: ಕಳೆದ ವಾರ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ತನ್ನ ಪ್ರಪ್ರಥಮ ಬೇಹುಗಾರಿಕೆ ಉಪಗ್ರಹ ತನ್ನ ನಿಗದಿತ ಕಾರ್ಯವನ್ನು ಮುಂದುವರಿಸಿದ್ದು ಅಮೆರಿಕದ ಶ್ವೇತಭವನ, ಪೆಂಟಗಾನ್ ಹಾಗೂ ಸಮೀಪದ ಪ್ರದೇಶದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಫೋಟೋಗಳನ್ನು ರವಾನಿಸಿದೆ ಎಂದು ಉತ್ತರ ಕೊರಿಯಾ ಮಂಗಳವಾರ ಹೇಳಿದೆ.
ನವೆಂಬರ್ 21ರಂದು ಬಾಹ್ಯಾಕಾಶ ತಲುಪಿದ್ದ ಬೇಹುಗಾರ ಉಪಗ್ರಹವು ಗುವಾಮ್ ಪ್ರದೇಶದಲ್ಲಿರುವ ಅಮೆರಿಕದ ವಾಯುನೆಲೆ, ಹವಾಯಿಯ ಹೊನೊಲುಲು ದ್ವೀಪದ ಪರ್ಲ್ ಬಂದರಿನಲ್ಲಿರುವ ಅಮೆರಿಕದ ಸೇನಾನೆಲೆ, ಅಮೆರಿಕ ನೌಕಾಪಡೆಯ ಕಾರ್ಲ್ ವಿನ್ಸನ್ ಯುದ್ಧವಿಮಾನದ ಫೋಟೋಗಳನ್ನು ಸೆರೆಹಿಡಿದು ರವಾನಿಸಿತ್ತು. ಇದೀಗ ಅಮೆರಿಕದ ಶ್ವೇತಭವನ ಮತ್ತು ಪೆಂಟಗಾನ್(ರಕ್ಷಣಾ ಪಡೆಗಳ ಕೇಂದ್ರ ಕಚೇರಿ)ನ ಫೋಟೋ ರವಾನಿಸಿದೆ ಎಂದು ಅಧ್ಯಕ್ಷ ಕಿಮ್ ಜಾಂಗ್ ಉನ್‍ರನ್ನು ಉಲ್ಲೇಖಿಸಿ ಉತ್ತರ ಕೊರಿಯಾದ ಸರಕಾರಿ ಸ್ವಾಮ್ಯದ ಕೆಸಿಎನ್ ಸುದ್ಧಿಸಂಸ್ಥೆ ವರದಿ ಮಾಡಿದೆ.
ಉತ್ತರ ಕೊರಿಯಾದ ಪ್ರತಿಪಾದನೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಿಲ್ಲ. ಆದರೆ ಬ್ಯಾಲಿಸ್ಟಿಕ್ ಕ್ಷಿಪಣಿ ತಂತ್ರಜ್ಞಾನವನ್ನು ಬಳಸಿಕೊಂಡು ಬಾಹ್ಯಾಕಾಶ ಕಾರ್ಯಕ್ರಮ ನಡೆಸುವುದು ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯದ ಉಲ್ಲಂಘನೆಯಾಗಿದೆ ಎಂದು ಶ್ವೇತಭವನದ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.