ಭಾರತೀಯ ನೌಕಾಪಡೆಗೂ ತಟ್ಟಿದ ಕೊರೋನಾ ಭೀತಿ; ಮುಂಬೈನ 21 ನಾವಿಕರಲ್ಲಿ ಸೋಂಕು ಪತ್ತೆ!
ಮುಂಬೈ (ಏ. 18): ದೇಶವನ್ನೇ ಕಂಗಾಲಾಗಿಸಿರುವ ಕೊರೋನಾ ವೈರಸ್ಗೆ ಈಗಾಗಲೇ 480 ಜನ ಸಾವನ್ನಪ್ಪಿದ್ದು, 14,380 ಜನರಿಗೆ ಸೋಂಕು ತಗುಲಿದೆ. ಭಾರತೀಯ ನೌಕಾಪಡೆಗೂ ಕೊರೋನಾ ವೈರಸ್ ತಗುಲಿದ್ದು, ಮುಂಬೈನಲ್ಲಿ 21 ನೌಕಾಪಡೆಯ ಸಿಬ್ಬಂದಿಗಳಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ನೌಕಾಪಡೆಯಯ ಇನ್ನಷ್ಟು ಸಿಬ್ಬಂದಿಗೆ ಸೋಂಕು ತಗುಲುವ ಭೀತಿ ಎದುರಾಗಿದೆ.
ಭಾರತೀಯ ನೌಕಾಪಡೆಯ 20 ನಾವಿಕರು ಸೇರಿ ಒಟ್ಟು 21 ಮಂದಿ ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಮುಂಬೈನ ಕೊಲಾಬಾ ಆಸ್ಪತ್ರೆಯಲ್ಲಿ ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅದರೆ, ಈ 21 ಮಂದಿಯಲ್ಲಿ 14 ಜನರಲ್ಲಿ ಯಾವುದೇ ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿರಲಿಲ್ಲ. ಏ. 7ರಂದು ನೌಕಾಪಡೆಯ ಓರ್ವ ಸಿಬ್ಬಂದಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಆತನಿದ್ದ ಅಪಾರ್ಟ್ಮೆಂಟ್ನಲ್ಲೇ ಈ 21 ಸೋಂಕಿತರು ವಾಸವಾಗಿದ್ದರು ಎನ್ನಲಾಗಿದೆ. ಆತನಿಂದಲೇ ಇವರಿಗೂ ಕೊರೋನಾ ಸೋಂಕು ಹರಡಿರುವ ಸಾಧ್ಯತೆಯಿದೆ. ನೌಕಾಪಡೆಯ ಓರ್ವನಿಗೆ ಸೋಂಕು ಪತ್ತೆಯಾದ ಬಳಿಕ ಅನುಮಾನದಿಂದ ಅಲ್ಲಿನ ಎಲ್ಲ ಸಿಬ್ಬಂದಿಯನ್ನೂ ಪರೀಕ್ಷೆ ನಡೆಸಿದಾಗ 21 ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮಹಾರಾಷ್ಟ್ರ ದೇಶದಲ್ಲೇ ಅತಿಹೆಚ್ಚು ಕೊರೋನಾ ಕೇಸುಗಳನ್ನು ಹೊಂದಿರುವ ರಾಜ್ಯವಾಗಿದೆ. ಮಹಾರಾಷ್ಟ್ರದಲ್ಲಿ ಶುಕ್ರವಾರ 118 ಜನರಿಗೆ ಕೊರೋನಾ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 3,320ಕ್ಕೆ ಏರಿಕೆಯಾಗಿದೆ. ಶುಕ್ರವಾರ ಒಂದೇ ದಿನ ಮುಂಬೈನಲ್ಲಿ 7 ಜನರು ಸಾವನ್ನಪ್ಪಿದ್ದು, ಕೊರೋನಾಗೆ ಒಟ್ಟಾರೆ 201 ಜನರು ಬಲಿಯಾಗಿದ್ದಾರೆ. ಇದುವರೆಗೂ ಪತ್ತೆಯಾಗಿರುವ 3,320 ಕೊರೋನಾ ಪ್ರಕರಣಗಳಲ್ಲಿ 2,085 ಕೇಸುಗಳು ಮುಂಬೈನದ್ದಾಗಿವೆ.
ಫ್ರೆಂಚ್ ನೌಕಾಪಡೆ ಮತ್ತು ಅಮೆರಿಕದ ನೌಕಾಪಡೆಯ ಯುದ್ಧನೌಕೆಗಳ ಸಿಬ್ಬಂದಿಯಲ್ಲಿ ಕೊರೋನಾ ವೈರಸ್ ತೀವ್ರವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದ 21 ನೌಕಾಪಡೆಯ ಸಿಬ್ಬಂದಿಗೆ ಕೊರೋನಾ ವೈರಸ್ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.