EBM News Kannada
Leading News Portal in Kannada

ಹಾಕಿ ರಾಷ್ಟ್ರಿಯ ಕ್ರೀಡೆ ಎಂದು ಘೋಷಿಸಿ: ಪ್ರಧಾನಿಗೆ ನವೀನ್ ಪಟ್ನಾಯಕ್ ಮನವಿ

0

ಭುವನೇಶ್ವರ: ನಾಲ್ಕು ತಿಂಗಳ ಹಿಂದಷ್ಟೇ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಭಾರತದ ಹಾಕಿ ತಂಡ(ಮಹಿಳಾ ಮತ್ತು ಪುರುಷ)ದ ಪ್ರಾಯೋಜಕತ್ವ ವಹಿಸಿಕೊಂಡಿದ್ದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಈಗ ಹಾಕಿ ರಾಷ್ಟ್ರಿಯ ಕ್ರೀಡೆ ಎಂದು ಅಧಿಸೂಚನೆ ಹೊರಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಬುಧವಾರ ಪ್ರಧಾನಿಗೆ ಪತ್ರ ಬರೆದಿರುವ ಪಟ್ನಾಯಕ್ ಅವರು, ಈಗಾಗಲೇ ರಾಷ್ಟ್ರೀಯ ಕ್ರೀಡೆ ಎಂದೇ ಜನಪ್ರಿಯವಾಗಿರುವ ಹಾಕಿಯನ್ನು ಇದುವರೆಗೂ ಅಧಿಕೃತವಾಗಿ ರಾಷ್ಟ್ರೀಯ ಕ್ರೀಡೆ ಎಂದು ಘೋಷಿಸದಿರುವುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ನಿಮಗೆ ತಿಳಿದಿರುವಂತೆ ನವೆಂಬರ್ ನಲ್ಲಿ ಮುಂದಿನ ಹಾಕಿ ವಿಶ್ವಕಪ್ ಒಡಿಶಾದಲ್ಲೇ ನಡೆಯುತ್ತಿದೆ. ಅದರ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾಗ ಹಾಕಿ ರಾಷ್ಟ್ರೀಯ ಕ್ರೀಡೆ ಎಂದು ಅಧಿಕೃತವಾಗಿ ಘೋಷಿಸದಿರುವ ವಿಷಯ ತಿಳಿದು ಅಚ್ಚರಿಯಾಯಿತು ಎಂದು ಸಿಎಂ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಹಾಕಿ ಅತ್ಯಂತ ಜನಪ್ರಿಯ ಕ್ರೀಡೆ. ಒಡಿಶಾ, ಜಾರ್ಖಂಡ್ ಮತ್ತು ಛತ್ತೀಸ್ ಗಢದ ಬುಡಕಟ್ಟು ಪ್ರದೇಶದಲ್ಲಿ ಹಾಕಿ ಜೀವನದ ಭಾಗವಾಗಿದೆ ಎಂದು ಸಿಎಂ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಲಕ್ಷಾಂತರ ಹಾಕಿ ಅಭಿಮಾನಿಗಳ ಆಶಯದಂತೆ ನೀವು ಅದನ್ನು ರಾಷ್ಟ್ರೀಯ ಕ್ರೀಡೆ ಎಂದು ಅಧಿಕೃತವಾಗಿ ಘೋಷಿಸುತ್ತೀರಿ ಎಂಬ ವಿಶ್ವಾಸವಿದೆ. ಈ ಮೂಲಕ ದೇಶ ಹೆಮ್ಮೆ ಪಡುವಂತೆ ಮಾಡಿದ ಹಾಕಿ ಆಟಗಾರರಿಗೆ ಗೌರವ ಸಲ್ಲಿಸದಂತಾಗುತ್ತದೆ ಮತ್ತು ಮುಂದಿನ ಪೀಳಿಗೆಗೂ ಸ್ಫೂರ್ತಿಯಾಗುತ್ತದೆ ಎಂದು ಪಟ್ನಾಯಕ್ ಅವರು ಹೇಳಿದ್ದಾರೆ.

Leave A Reply

Your email address will not be published.