EBM News Kannada
Leading News Portal in Kannada

ಕಾಲ್ಚೆಂಡು ಮಾಯೆ: ಒಬ್ಬರ ಗೆಲುವು ಮತ್ತೊಬ್ಬರಿಗೆ ಸೂತಕ

0

ಅದು 1950ನೇ ಇಸವಿ. ಬ್ರೆಜಿಲ್‌ನಲ್ಲಿ ಜರಗಿನ ಫುಟ್ಬಾಲ್‌ ವಿಶ್ವಕಪ್‌ನ ಅಂತಿಮ ಪಂದ್ಯ ಮುಗಿದಿತ್ತು. ಫೈನಲ್‌ವರೆಗೂ ಗೆಲುವಿನ ನಾಗಾಲೋಟದಲ್ಲಿ ಓಡುತ್ತ ಬಂದಿದ್ದ ಬ್ರೆಜಿಲ್‌ ಎಂಬ ಕುದುರೆ ಅಂತಿಮ ಹಣಾಹಣಿಯಲ್ಲಿ ಮುಗ್ಗರಿಸಿತ್ತು. ಉರುಗ್ವೆ ಈ ತಂಡಕ್ಕೆ ಸೋಲುಣಿಸಿತ್ತು. ವಿಶೇಷವೆಂದರೆ ಅಲ್ಲಿ ನೆರೆದಿದ್ದ ಯಾರಿಗೂ ಈ ಸೋಲನ್ನು ಅರಗಿಸಿಕೊಳ್ಳಲಾಗಲಿಲ್ಲ. ನೆರೆದಿದ್ದ ಎರಡು ಲಕ್ಷ ಪ್ರೇಕ್ಷಕ ಗಡಣಕ್ಕೆ ಈ ಶಾಕ್‌ಗೆ ಗಪ್‌ಚುಪ್‌ ಆಗಿತ್ತು! ಸೋಲಿನ ಆಘಾತದ ಪರಿ ಹೇಗಿತ್ತು ಎಂದರೆ ಸಂಘಟಕರು ಗೆದ್ದ ತಂಡಕ್ಕೆ ಟ್ರೋಫಿ ಕೊಡುವುದನ್ನು ಮರೆತುಬಿಟ್ಟಿದ್ದರು. ಅಸಲಿ ವಿಷಯವೆಂದರೆ ಇದೊಂದು ಜಾಣ ಮರೆವು. ಕಾಲ್ಚೆಂಡು ಆಟವೇ ಜೀವನ ಧರ್ಮವಾಗಿರುವ ಇಲ್ಲಿ ಎದುರಾಳಿ ದೇಶಕ್ಕೆ ಕಪ್‌ ಕೊಟ್ಟರೆ ಕ್ರೀಡಾಂಗಣದಲ್ಲಿ ಅಲ್ಲೋಲ ಕಲ್ಲೋಲವಾಗಿಬಿಡುತ್ತದೆ ಎನ್ನುವ ಭಯ ಸಂಘಟಕರಿಗಿತ್ತು. ಕೊನೆಗೆ ಹೇಗೋ ಅದನ್ನು ಸಂಭಾಳಿಸಿ ನಿಟ್ಟುಸಿರು ಬಿಟ್ಟರು.

* ಅದು 1960ನೇ ಇಸವಿ. ನೈಜೀರಿಯಾ ನಾಗರಿಕ ಯುದ್ಧದಲ್ಲಿ ತೊಡಗಿತ್ತು. ಇದೇ ವೇಳೆ ಅಭಿಜಾತ ಫುಟ್ಬಾಲ್‌ ಆಟಗಾರ ಪೀಲೆ ಸ್ಯಾಂಟೋಸ್‌ ಪರ, ನೈಜೀರಿಯಾದಲ್ಲಿ ಪ್ರದರ್ಶನ ಪಂದ್ಯ ಆಡಲಿದ್ದರು. ಪರಿಣಾಮ, ನೈಜೀರಿಯಾ ನಾಗರಿಕ ಯುದ್ಧಕ್ಕೆ ವಿರಾಮ ಘೋಷಿಸಿತ್ತು!

* 1986, ಮೆಕ್ಸಿಕೋ. ವಿಶ್ವಕಪ್‌ ಫುಟ್ಬಾಲ್‌ ಪಂದ್ಯ. ಕಾಲ್ಚೆಂಡಿನಾಟದ ಮಾಂತ್ರಿಕ ಮರಡೋನ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ನಿಯಮಗಳನ್ನು ಮೀರಿ ಕೈಯ ಸಹಾಯದಿಂದ ಗೋಲು ಬಾರಿಸಿದ್ದರು. ಎಲ್ಲರ ಕಣ್‌ ತಪ್ಪಿಸಿ ಕ್ಷ ಣಾರ್ಧದಲ್ಲಿಯೇ ಈ ಪವಾಡ ನಡೆದುಹೋಗಿತ್ತು. ‘ಈ ಗೋಲಾಗುವುದರಲ್ಲಿ ಕೊಂಚ ಮರಡೋನನ ತಲೆ ಹಾಗೂ ದೇವರ ಕೈಚಳಕವಿದೆ’ ಎಂದು ಮರಡೋನ ‘ಕಾವ್ಯಾತ್ಮಕ’ವಾಗಿ ಹೇಳಿಕೆ ನೀಡಿದ. ಇದೇ ಪಂದ್ಯದಲ್ಲಿ ಈತ ಆರು ಮಂದಿ ಇಂಗ್ಲೆಂಡ್‌ ಆಟಗಾರರನ್ನು ವಂಚಿಸಿ ಚೆಂಡನ್ನು ಗುರಿ ಮುಟ್ಟಿಸಿದ್ದು , ‘ಶತಮಾನದ ಶ್ರೇಷ್ಠ ಗೋಲ್‌’ ಎಂಬ ಹಿರಿಮೆ ಗಳಿಸಿತು. ಪ್ರತಿ ವಿಶ್ವಕಪ್‌ನಲ್ಲೂ ಹ್ಯಾಂಡ್‌ ಆಫ್‌ ಗಾಡ್‌ ಮತ್ತು ಶತಮಾನದ ಶ್ರೇಷ್ಠ ಗೋಲ್‌ನ ಪ್ರಸ್ತಾಪ ಬಂದೇ ಬರುತ್ತದೆ. ಕಾಲ್ಚೆಂಡು ಆಟದ ಸಾರ್ವಕಾಲಿಕ ಶ್ರೇಷ್ಠರು ಯಾರು ಎನ್ನುವ ಚರ್ಚೆಯಲ್ಲಿ ಮರಡೋನಾ ಮತ್ತು ಪೀಲೆಯ ಹೆಸರುಗಳು ತಪ್ಪದೆ ಪ್ರಸ್ತಾಪವಾಗಿ ಅವರ ಆಟದ ಅಮೋಘ ಚಿತ್ರಗಳ ಮೆಲುಕಾಟ ನಡೆದೇ ನಡೆಯುತ್ತದೆ.

– ಮೇಲ್ಕಂಡ ಮೂರು ಸಂಗತಿಗಳು ಕಾಲ್ಚೆಂಟು ಆಟದ ರೋಚಕತೆ ಮತ್ತು ಮಾಂತ್ರಿಕತೆಯನ್ನು ಬಿಡಿಸಿಡುತ್ತವೆ. ಆಟವೊಂದು ಜೀವನ ಧರ್ಮವಾಗುವ, ನಡಾವಳಿಯಾಗುವ, ವ್ಯಕ್ತಿತ್ವ ಮತ್ತು ಸಂಸ್ಕೃತಿಯಾಗುವ ಚೋದ್ಯ ಬೇರೆಲ್ಲೂ ಕಾಣಿಸದು.

ರುದ್ರ-ಮನೋಹರ

ಸಾಹಸ, ಸ್ಫರ್ಧೆ, ಸಹಕಾರ, ಸಾಂಘಿಕತೆ, ವೈಯಕ್ತಿಕತೆ, ನೈಪುಣ್ಯಗಳಂಥ ವಿರುದ್ಧ ಗುಣಗಳ ‘ಮಹಾ ಸಮ್ಮಿಲನ’ ಎಂದೆನಿಸಿರುವ ವಿಶ್ವಕಪ್‌ ಫುಟ್ಬಾಲ್‌ಗಿರುವಷ್ಟು ಉತ್ಕರ್ಷ ಬೇರೆ ಯಾವ ಆಟಕ್ಕೂ ಇಲ್ಲ. ಸುಂದರವಾಗಿ ಮತ್ತು ಸುರಕ್ಷ ತವಾಗಿ ಆಡಿ ಗೆಲ್ಲುವುದಕ್ಕಿಂತ ಕುರೂಪವಾಗಿದ್ದು ಗೆಲ್ಲುವುದೇ ಮೇಲು ಎನ್ನುವ ದೈತ್ಯರಿಗೇನೂ ಇಲ್ಲಿ ಕೊರತೆ ಇಲ್ಲ. ಒಂದು ಚೆಂಡಿನ ಮೇಲೆ 22 ಮಂದಿ ಮುಗಿಬಿದ್ದು ಅದನ್ನು ವಿರುದ್ಧ ಗುರಿಗಳತ್ತ ಚಿಮ್ಮಿಸಲು ನಡೆಸುವ ಸೆಣಸಾಟ ಬೇಟೆಯಂತೆ ಕಾಣಿಸುತ್ತದೆ. ಒಂದು ರೀತಿಯಲ್ಲಿ ಇನ್‌ಬಿಲ್ಟ್‌ ಆದ ಒರಟುತನದಲ್ಲಿ ಅಪಾರ ಕಲಾತ್ಮಕತೆಯೂ ಸೇರಿಕೊಂಡಿರುವ ಕಾರಣಕ್ಕೆ ಕಾಲ್ಚೆಂಡು ರುದ್ರ-ಮನೋಹರ ಆಟ ಎಂದೆನಿಸಿದೆ.

ಯುರೋಪ್‌, ಲ್ಯಾಟಿನ್‌ ಅಮೆರಿಕ, ಅರಬ್‌, ದಕ್ಷಿಣ ಆಫ್ರಿಕಾದ ತಂಡಗಳ ‘ಒದ್ದಾಟ’ದಲ್ಲಿ ಪಾರಂಪರಿಕ ಪ್ರಾದೇಶಿಕ ಸೊಗಡು ಇರುತ್ತದೆ. ಯೂರೋಪ್‌ ದೇಶಗಳು ಲಾಂಗ್‌ಪಾಸ್‌ಗಳಿಗೆ ಒತ್ತು ಕೊಟ್ಟರೆ ಲ್ಯಾಟಿನ್‌ ಅಮೆರಿಕದ ದೇಶಗಳು ಕಿರು ಪಾಸ್‌ಗಳಿಗೆ ಹೆಚ್ಚು ಆದ್ಯತೆ ನೀಡುತ್ತವೆ. ಹಾವುರಾಣಿಯಂತೆ ಮೈದಾನದಲ್ಲಿ ಹರಿದು ಎದುರಾಳಿಗಳ ಕೋಟೆಯನ್ನು ಚಾಣಾಕ್ಷ ತನದಿಂದ ಛಿದ್ರಿಸಿ ನುಗ್ಗುವ ಪರಿಗೆ ಫಿದಾ ಆಗದವರು ಕಡಿಮೆ. ಇದೀಗ 20ನೇ ಫಿಫಾ ವಿಶ್ವಕಪ್‌ಗೆ ರಷ್ಯಾ ಆತಿಥ್ಯ ವಹಿಸಿದೆ. ಜೂನ್‌ ಜೂನ್‌ 14ರಿಂದ ಜುಲೈ 15ರ ವರೆಗೆ ಒಂದು ಕಪ್‌ಗೆ 32 ದೇಶಗಳು ಸೆಣಸಲಿವೆ. ಬರೋಬ್ಬರಿ ಇನ್ನೊಂದು ತಿಂಗಳು ಜಗತ್ತಿನ ಬಹುಪಾಲು ದೇಶಗಳ ಜನರ ಮೈ ಮೇಲೆ ಸಾಕರ್‌ ದೇವರು ಬಂದಿರುತ್ತದೆ. ಮೈದಾನದಲ್ಲಿ ಆಟಗಾರರು ಚೆಂಡಿನ ಮೂಲಕ ಚಿತ್ತಾರ ಬಿಡಿಸುತ್ತಿದ್ದರೆ ಅದನ್ನು ಕಂಡು ಭುವಿಯೇ ಪುಳಕಗೊಳ್ಳುತ್ತದೆ.

8 ವರ್ಷಗಳ ಹಿಂದೆಯೇ 9 ದೇಶಗಳ ವಿರುದ್ಧ ಸೆಣಸಿ ರಷ್ಯಾ ವಿಶ್ವಕಪ್‌ ಆತಿಥ್ಯವನ್ನು ಮೊಟ್ಟಮೊದಲ ಬಾರಿ ಗಳಿಸಿಕೊಂಡಿತು. ಅಂತಾರಾಷ್ಟ್ರೀಯ ಫುಟ್ಬಾಲ್‌ ಒಕ್ಕೂಟದ ಪದಾಧಿಕಾರಿಗಳಿಗೆ ಲಂಚ ಕೊಟ್ಟು ಬಿಡ್‌ ತನ್ನ ಪರ ವಾಲಿಸಿಕೊಂಡಿತು ಎನ್ನುವ ಆರೋಪಗಳು ಆಗ ಕೇಳಿ ಬಂದಿದ್ದವು. ಈ ಕುರಿತು ಒಂದು ತನಿಖೆ ನಡೆದರೂ ಅದರ ಸಾರಾಂಶ ಬಹಿರಂಗವಾಗಲೇ ಇಲ್ಲ. ವಿಶ್ವಕಪ್‌ ನಡೆಸಲು ತುರುಸಿನ ಪೈಪೋಟಿ ಇದ್ದೇ ಇರುತ್ತದೆ ಏಕೆಂದರೆ ಇದೊಂದು ಮಹಾ ಖರ್ಚಿನ ಬಾಬ್ತು ಎಂದೆನಿಸಿದರೂ ಇದರಿಂದ ದೇಶದ ಚಹರೆಯೇ ಬದಲಾಗುತ್ತದೆ. ಆತಿಥ್ಯ ವಹಿಸುವ ದೇಶಗಳು ಜಾಗತಿಕವಾಗಿ ಕಣ್ಮಣಿಗಳಾಗುತ್ತವೆ.

ಆಟದಲ್ಲಿ ಸದಾ ಮುಂದಿರುವ ರಷ್ಯಾದ ಕಾಲ್ಚೆಂಡು ಚರಿತ್ರೆ ಭವ್ಯವಾಗಿಯೇನೂ ಇಲ್ಲ. ಅದು ಯಾವಾಗಲೂ ಗೆದ್ದೂ ಇಲ್ಲ. ಈಗಲೂ ಗೆಲ್ಲುವುದಿಲ್ಲ. ಆದರೂ 11.8 ಬಿಲಿಯನ್‌ ಡಾಲರ್‌ ಖರ್ಚು ಮಾಡಿ ಆತಿಥ್ಯ ವಹಿಸುತ್ತಿದೆ. ನಾವೇ ಗೆಲ್ಲಬೇಕು ಎಂಬುದು ಮುಖ್ಯ ಮಾನದಂಡವೇನೂ ಅಲ್ಲ. ಹಲವು ವಿಶಿಷ್ಟ ಅಂಶಗಳಿಂದ ರಷ್ಯಾದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಗಮನ ಸೆಳೆಯುತ್ತದೆ.

ವಿಜ್ಞಾನ, ತಂತ್ರಜ್ಞಾನದಲ್ಲಷ್ಟೇ ಅಲ್ಲ ಜಾಗತಿಕ ಕ್ರೀಡೆಯಲ್ಲೂ ಕೋರೈಸುವ ಸಾಧನೆ ಮಾಡಿರುವ ರಷ್ಯಾ, 2014ರಲ್ಲಿಯೇ ವರ್ಲ್ಡ್‌ಕಪ್‌ ‘ತೋಳ’ -ಲೋಗೊ (Wಟ್ಝ್ಛ ಘaಚಿಜಿvaka) ವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಬಿಡುಗಡೆ ಮಾಡಿತು! ಈ ದೇಶ ಕಳೆದ ನಾಲ್ಕೈದು ವರ್ಷಗಳಿಂದ ಈ ದೊಡ್ಡ ಕ್ರೀಡಾ ಹಬ್ಬಕ್ಕೆ ತನ್ನ ದೇಶವನ್ನು ಸಜ್ಜುಗೊಳಿಸಿಕೊಂಡಿದೆ. ಇಲ್ಲಿ ಯಾವ ಪರಿ ಮೇನಿಯಾ ಇದೆ ಎಂದರೆ ಕಳೆದ ವರ್ಷ ಈ ಕ್ರೀಡಾಕೂಟದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಲು 1, 77,000 ಮಂದಿ ಅರ್ಜಿ ಹಾಕಿಕೊಂಡಿದ್ದರು. ಇವರ ಪೈಕಿ 17 ಸಾವಿರ ಯುವಕ ಯುವತಿಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಈ ಬಾರಿ ಒಟ್ಟು 32 ತಂಡಗಳು ಕಣದಲ್ಲಿವೆ. ರಷ್ಯಾ ಸೇರಿದಂತೆ 14 ಯುರೋಪಿಯನ್‌ ವಲಯಕ್ಕೆ ಸೇರಿದರೆ ಆಫ್ರಿಕಾ ವಲಯದ 5, ಏಷ್ಯಾ ಮತ್ತು ¨ಕ್ಷಿಣ ಆಮೆರಿಕದಿಂದ – 10, ಉತ್ತರ ಅಮೆರಿಕದ 3 ದೇಶಗಳು ಸೆಣಸಾಟ ನಡೆಸಲಿವೆ. 32 ತಂಡಗಳ ಪೈಕಿ 20 ದೇಶಗಳು ಹಿಂದಿನ ಟೂರ್ನಿಯಲ್ಲೂ ಪಾಲ್ಗೊಂಡಿದ್ದವು. ನಾಲ್ಕು ಬಾರಿ ಕಪ್‌ ಗೆದ್ದಿದ್ದ ಇಟಲಿ ಮೊದಲ ಬಾರಿ ಈ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಮೂರು ಬಾರಿ ರನ್ನರ್‌ ಅಪ್‌ ಆಗಿದ್ದ ನೆದರ್ಲೆಂಡ್‌ ಈ ಬಾರಿ ಅರ್ಹತೆಯನ್ನೇ ಗಳಿಸಲಿಲ್ಲ. ಅಮೆರಿಕ, ಫಾನಾ, ಐವರಿಕೋಸ್ಟ್‌ಗಳದ್ದೂ ಇದೇ ಕತೆ. ಈ ಬಾರಿ ಬುಕ್ಕಿಗಳ ನೆಚ್ಚಿನ ತಂಡ ಜರ್ಮನಿ. ಕಳೆದ ಬಾರಿ ಅರ್ಜೆಂಟೀನಾದ ವಿರುದ್ಧ ಗೆದ್ದ ಜರ್ಮನಿ ಈ ಬಾರಿ ಕಪ್‌ ಉಳಿಸಿಕೊಳ್ಳುವ ಆವೇಗದಲ್ಲಿದೆ. ಬ್ರೆಜಿಲ್‌, ಫ್ರಾನ್ಸ್‌, ಸ್ಪೇನ್‌, ಅರ್ಜೆಂಟೀನಾ, ಪೋರ್ಚುಗಲ್‌ ತಂಡಗಳನ್ನು ಕಡೆಗಣಿಸುವಂತೆಯೇ ಇಲ್ಲ. ಯಾವ ಕ್ಷ ಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವ ಅವಕಾಶಗಳು ಈ ಆಟದಲ್ಲಿ ಧಾರಾಳವಾಗಿರುವುದರಿಂದ ಪ್ರೆಡಿಕ್ಷ ನ್‌ ನಿಖರವಾಗಿರುವುದು ಸಾಧ್ಯವಿಲ್ಲ.

ನೋಡುವುದರಲ್ಲೇ ಖುಷಿ ಕಾಣುವ ಭಾರತ

ಜಗತ್ತಿನಾದ್ಯಂತ ಫುಟ್‌ಬಾಲ್‌ ವಿಶ್ವಕಪ್‌ ಜ್ವರ ಏರಿದೆ. ಪಶ್ಚಿಮ ಬಂಗಾಳ, ಕೇರಳ, ಗೋವಾ, ಮಣಿಪುರ, ಮಿಜೋರಮ್‌, ಸಿಕ್ಕಿಂಗಳಲ್ಲಿ ಸಾಕರ್‌ ಖದರ್‌ ಇದೆ

1893ರಲ್ಲಿಯೇ 1893ರಲ್ಲಿ ಭಾರತೀಯ ಫುಟ್‌ಬಾಲ್‌ ಸಂಘ (ಐಎಫ್‌ಎ) ಅಸ್ತಿತ್ವಕ್ಕೆ ಬಂದರೂ ನಾವಿನ್ನೂ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಲು ಹೆಣಗಾಡುತ್ತಿದ್ದೇವೆ. 1898 ರಲ್ಲಿಯೇ ಶಿಮ್ಲಾದಲ್ಲಿ ಸಾಕರ್‌ ಟೂರ್ನಿ ನಡೆಯಿತು. ಇದು ಜಗತ್ತಿನಲ್ಲಿಯೇ ನಡೆದ ಮೂರನೇ ಟೂರ್ನಿ. ಬ್ರಿಟಿಷರು ಕ್ರಿಕೆಟ್‌ನಂತೆ ಸಾಕರ್‌ಅನ್ನೂ ಭಾರತಕ್ಕೆ ಪರಿಚಯಿಸಿದರು. ಆದರೆ ಅದು ನಮಗಿನ್ನೂ ಒಲಿದಿಲ್ಲ.

1950ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತಕ್ಕೆ ಸ್ಪರ್ಧಿಸುವ ಆಹ್ವಾನ ನೀಡಲಾಗಿತ್ತು. ಆದರೆ ಪ್ರಯಾಣದ ವೆಚ್ಚ ಹಾಗೂ ಶೂ ಧರಿಸಿ ಆಡುವುದಕ್ಕೆ ಆಗುವುದಿಲ್ಲ ಎಂಬ ಕಾರಣಕ್ಕೆ ಭಾರತ ಪುಟ್ಬಾಲ್‌ ಸಂಸ್ಥೆ ಆ ಆಹ್ವಾನವನ್ನು ತಿರಸ್ಕರಿಸಿತ್ತು. ಫಿಫಾದ ಮಾಜಿ ಅಧ್ಯಕ್ಷ ಸೆಪ್‌ ಬ್ಲಾಟರ್‌ ಒಮ್ಮೆ ಭಾರತವನ್ನು ‘ನಿದ್ರಿಸುತ್ತಿರುವ ದೈತ್ಯ,’ ಎಂದಿದ್ದರು. ಈ ದೇಶದಲ್ಲಿ ಅಪಾರ ಸಾಮರ್ಥ್ಯ‌ ಅಡಗಿದೆ. ಆದರೆ ಎಚ್ಚರವೇ ಇಲ್ಲ ಎಂಬುದು ಅವರ ಮಾತಿನ ತಿರುಳು. ಫಿಫಾ ರಾರ‍ಯಂಕಿಂಗ್‌ನಲ್ಲಿ 97ನೇ ಸ್ಥಾನದಲ್ಲಿದೆ. ಅರ್ಹತೆ ಪಡೆಯುವ ತಂಡಗಳ ಸಂಖ್ಯೆ 32. ನಮ್ಮ ದಾರಿ ಇನ್ನೂ ದೂರ.

. ಕರ್ನಾಟಕದಲ್ಲೂ ಸಾಕರ್‌ ಆಡುವ ಊರುಗಳು ಇವೆಯಾದರೂ ಇದು ಸಾರ್ವತ್ರಿಕವೇನಲ್ಲ. ಆದರೆ, ಜಾಗತಿಕವಾಗಿ ಖ್ಯಾತರಾಗಿರುವ ಈ ಆಟಗಾರರ ಹೇರ್‌ಸ್ಟೈಲ್‌, ಅವರ ಜೆರ್ಸಿಗಳ ಸಂಖ್ಯೆ, ಅವರ ಜೀವನಶೈಲಿ ನಮ್ಮನ್ನೂ ಪ್ರಭಾವಿಸುತ್ತದೆ. ಅವರನ್ನು ಅನುಕರಿಸುವ ಅದೆಷ್ಟೋ ಅಭಿಮಾನಿಗಳು ಇಲ್ಲಿಯೂ ಇದ್ದಾರೆ.

ವಿಶ್ವಕಪ್‌ ಯಾರಿಗೆ ಎಷ್ಟು?

1930ರಿಂದ ಪ್ರತಿ ನಾಲ್ಕುವರ್ಷಗಳಿಗೆ ಒಂದು ಸರ್ತಿ 2016ರ ವರೆಗೆ 20 ವಿಶ್ವಕಪ್‌ಗಳು ನಡೆದಿವೆ. 2018ರಲ್ಲಿ ರಷ್ಯಾದಲ್ಲಿ ನಡೆಯುತ್ತಿರುವುದು 21ನೇ ವಿಶ್ವಕಪ್‌. 1942 ಹಾಗೂ 46ರ ಆವೃತ್ತಿಗಳು 2ನೇ ಜಾಗತಿಕ ಯುದ್ಧದ ಕಾರಣ ರದ್ದಾಗಿವೆ. 20 ವಿಶ್ವಕಪ್‌ಗಳ ಪೈಕಿ ಯೂರೋಪ್‌ ಹಾಗೂ ದಕ್ಷಿಣ ಅಮೆರಿಕ ಖಂಡಗಳ ತಂಡಗಳದ್ದೇ ಮೇಲುಗೈ. ಆಫ್ರಿಕಾ ತಂಡಗಳು ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದೇ ದೊಡ್ಡ ಸಾಧನೆ (ಕೆಮರೂನ್‌-1990 ಹಾಗೂ ಸೆನೆಗಲ್‌-2002). ಒಸಿಯಾನ್‌ ರಾಷ್ಟ್ರಗಳ ಬಗ್ಗೆ ಹೇಳಬೇಕೆಂದರೆ 2006ರಲ್ಲಿ ಆಸ್ಪ್ರೇಲಿಯಾ ತಂಡ 2ನೇ ಸುತ್ತು ಪ್ರವೇಶಿಸಿದ್ದೇ ದೊಡ್ಡ ಸಾಧನೆ. ಏಷ್ಯಾ ದೇಶಗಳು ಲೆಕ್ಕಕ್ಕಿಲ್ಲ. ಒಟ್ಟಾರೆ ಕಳೆದ 20 ವಿಶ್ವಕಪ್‌ಗಳಲ್ಲಿ 8 ರಾಷ್ಟ್ರಗಳು ಪ್ರಶಸ್ತಿ ಬಾಚಿಕೊಂಡಿವೆ.

Leave A Reply

Your email address will not be published.